ಕಂಕನಾಡಿ ಬೈಪಾಸ್ ಪಂಪ್ವೆಲ್ ರಸ್ತೆ ರಿಪೇರಿ ಶೀಘ್ರ ನಡೆಯಲಿ

ಕಂಕನಾಡಿ ಬೈಪಾಸ್ ರಸ್ತೆ ಹಾಗೂ ಕಂಕನಾಡಿ ಒಳರಸ್ತೆ ಪಂಪ್ವೆಲ್ಲಿಗೆ ಸೇರುವ ಈ ಎರಡು ರಸ್ತೆಗಳ ಪರಿಸ್ಥಿತಿ ಎಷ್ಟು ಹೇಳಿದಷ್ಟು ಸಾಲದು. ಮೂರ್ನಾಲ್ಕು ತಿಂಗಳುಗಳಿಂದ ಈ ರಸ್ತೆಗಳ ದುರಾವಸ್ಥೆಗಳ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲಿ ಆಗಿಂದಾಗೆ ವರದಿಗಳು ಬರುತ್ತಿವೆ. ಅದರೇನು ಮಾಡುವುದು ಮನಪಾ ಮೇಯರ್, ಕಮಿಷನರ್ ಹಾಗೂ ಇತರ ಅಧಿಕಾರಿಗಳು ಈ ರಸ್ತೆಯ ಸ್ಥಿತಿಗತಿಗಳನ್ನು ನೋಡಿಯೂ ದಿನಪತ್ರಿಕೆಗಳಲ್ಲಿ ಓದಿ ತಿಳಿದು ಅವುಗಳನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡದೆ ತೆಪ್ಪಗೆ ಕುಳಿತಿರುವುದು ತೀರಾ ಶೋಚನೀಯವಾಗಿದೆ. ನಮ್ಮ ಸಚಿವರು ಶಾಸಕರು, ಸಂಸದರು ಹಾಗೂ ಇತರ ಅಧಿಕಾರಿ ವರ್ಗದವರು ಈ ಎರಡು ರಸ್ತೆ ಹಲವಾರು ಬಾರಿ ಅತ್ತಿಂದಿತ್ತ, ಇತ್ತಿಂದತ್ತ ಸಂಚರಿಸುತ್ತಾರೆ. ಇವರೆಡು ರಸ್ತೆಗಳು ನಮ್ಮ ನಗರಕ್ಕೆ ಪ್ರವೇಶಿಸುವ ಪ್ರಮುಖ ರಸ್ತೆಗಳಾಗಿವೆ. ಎಷ್ಟೋ ಸರಕಾರಿ ಖಾಸಗಿ ಬಸ್ಸುಗಳು ಹಾಗೂ ಇತರ ಸಾವಿರಾರು ವಾಹನಗಳು ಈ ಎರಡು ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತವೆ. ಒಮ್ಮೆ ಈ ರಸ್ತೆಯಲ್ಲಿ ಹೋದವರಿಗೆ ಇನ್ನೊಂದು ಬಾರಿ ಹೋಗಲು ತೀರಾ ಅಸಹ್ಯವಾಗುತ್ತದೆ ಅಲ್ಲದೇ ಇಡೀ ಮೈಯಲ್ಲಿನ ನಟ್ಟು ಬೋಲ್ಟ್ ಅಂಗಾಂಗಳು ಕಳಚಿ ಬಿದ್ದಂತೆ ಭಾಸವಾಗುತ್ತಿದೆ. ವಿಶೇಷವಾಗಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಮೇಯರ್ ಮಳೆಗಾಲ ಮುಗಿದ ಕೂಡಲೇ ನಮ್ಮ ನಗರದ ರಸ್ತೆಗಳನ್ನೆಲ್ಲಾ ರಿಪೇರಿ ಮಾಡಲಾಗುವುದೆಂದು ಆಶ್ವಾಸನೆ ನೀಡಿದರೂ ನಮ್ಮ ಮುಖ್ಯ ರಸ್ತೆಗಳ ರಿಪೇರಿ ಕೆಲಸ ಇನ್ನು ಸಹ ಶುರು ಆಗದಿರುವುದು ವಿಷಾದನೀಯ ಸಂಗತಿ ರಸ್ತೆಗಳ ರಿಪೇರಿಗೆ ಡಾಮರೀಕರಣಕ್ಕೆ ಅಲ್ಲಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೂ ಇಂತಹ ಪ್ರಮುಖ ಕೆಲಸ ಕಾಮಗಾರಿಗಳಿಗೆ ಮನಪಾ ವತಿಯಿಂದ ಇಂಥಹ ಅಸಡ್ಡೆ ಸಲ್ಲದು ಇಂಥ ಪ್ರಮುಖ ರಸ್ತೆಗಳಲ್ಲಿ ಬೇಗನೆ ರಿಪೇರಿ ಮಾಡಿ ಮುಗಿಸದಿದ್ದಲ್ಲಿ ಏನು ಪ್ರಯೋಜನ ಜಿಲ್ಲಾಧಿಕಾರಿ ಸಹ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಿ

  • ಜೆ ಎಫ್ ಡಿಸೋಜ  ಅತ್ತಾವರ