ಸವದತ್ತಿಯ ರೇಣುಕಾ ಎಲ್ಲಮ್ಮ ದೇವಳ

ಕುತೂಹಲಗಳ ಸಂಗಮ

ಬಯಕೆ ಎಲ್ಲಾ ನಿಯಮಗಳನ್ನೂ ಮೀರಿ ನಿಲ್ಲುತ್ತದೆ ಹಾಗೂ ಅದನ್ನು  ಹಿಂಸೆಯಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲದೆಂಬ ಪ್ರಕೃತಿಯ ಸತ್ಯವನ್ನು ಸಂಭಾಳಿಸಲು  ನಮ್ಮಿಂದ ಸಾಧ್ಯವಿಲ್ಲ

  • ದೇವದತ್ತ ಪಟ್ನಾಯಕ್

ಬೆಳಗಾವಿ ವಿಮಾನ ನಿಲ್ದಾಣದಿಂದ ಧಾರವಾಡಕ್ಕೆ ತೆರಳುತ್ತಿದ್ದ ನಾನು ನನ್ನ ಜತೆಯಿದ್ದ ಅತಿಥೇಯರನ್ನು “ಸವದತ್ತಿ ಇಲ್ಲೇ ಹತ್ತಿರದಲ್ಲಿದೆಯಲ್ಲವೇ?” ಎಂದು ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶದಲ್ಲಿರುವ ಖ್ಯಾತ ರೇಣುಕಾ-ಎಲ್ಲಮ್ಮನ ದೇವಳದ ಬಗ್ಗೆ ಆತನನ್ನು ಕೇಳಿದೆ. ಬೇರೇನಾದರೂ ಯೋಚಿಸುವುದರೊಳಗಾಗಿ ನಮ್ಮ ವಾಹನ ಹೆದ್ದಾರಿಯಿಂದಾಚೆಗೆ ಬಂದು ಈ ದೇವಳದ ಹಾದಿಯಲ್ಲಿ ಸಾಗಿತು.

“ಇದು ನಿಮ್ಮ ಪ್ರವಾಸದಲ್ಲಿ ಒಳಗೊಂಡಿಲ್ಲ ಅಲ್ಲವೇ ? ಸ್ಪಷ್ಟವಾಗಿ ಆಕೆ ನಿಮಗೆ ಕರೆ ಕಳುಹಿಸಿದ್ದಾಳೆ” ಎಂದು ನನ್ನ ಅತಿಥೇಯರು ಹೇಳಿದರು. ನಾನು ತಲೆಯಲ್ಲಾಡಿಸಿದೆ. ಇದನ್ನೇ `ಬುಲಾವ’ ಅಥವಾ `ಕರೆ’ ಎಂದು ಹೇಳಲಾಗುತ್ತದೆ – ಅದೇನೆಂದರೆ ಜನರಿಗೆ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಹೋಗಬೇಕೆನ್ನುವ ತುಡಿತ ಹೆಚ್ಚಾಗುವುದು.

ಈ ದೇವಳವನ್ನು 16ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದರೂ ಅದಕ್ಕಿಂತಲೂ ಹಳೆಯ, ಸುಮಾರು 8ನೇ ಶತಮಾನದಲ್ಲಿ ರಾಷ್ಟ್ರಕೂಟ ಅರಸರ ಕೆಲವೊಂದು ನಿರ್ಮಾಣಗಳನ್ನು ಇಲ್ಲಿ ಕಾಣಬಹುದಾಗಿದೆ.

ಎಲ್ಲಮ್ಮ ದೇವಳದ ಕಥೆ ಸಂಸ್ಕøತ ಪುರಾಣಗಳಲ್ಲಿದ್ದರೂ, ಮೌಖಿಕವಾಗಿ  ಜನರಿಂದ ಜನರಿಗೆ ತಿಳಿದು ಬಂದ ವಿಚಾರಗಳು ಪುರಾಣಗಳಿಗಿಂತಲೂ ಆಸಕ್ತಿದಾಯಕ.

ಇದರಂತೆ ರೇಣುಕಾ ಒಬ್ಬಳು ರಾಜಕುಮಾರಿಯಾಗಿದ್ದು ಆಕೆಯನ್ನು ಭಾರ್ಗವ ವಂಶದ ಮುನಿ ಜಮದಗ್ನಿಗೆ ವಿವಾಹ ಮಾಡಿಕೊಡಲಾಗಿತ್ತು. ಆಕೆಗೆ ಐದು ಮಂದಿ ಗಂಡು ಮಕ್ಕಳು. (ಸ್ಥಳೀಯ ಜನರ ನಂಬಿಕೆಯ ಪ್ರಕಾರ ಏಳು ಮಕ್ಕಳು) ಆಕೆ ಸತಿಯಾಗಿದ್ದಳಲ್ಲದೆ ಆಕೆಯಲ್ಲಿದ್ದ ಶಕ್ತಿಯಿಂದಾಗಿ ಆಕೆ ಸುಡದ ಮಡಿಕೆಗಳಲ್ಲೂ ನೀರು ಸಂಗ್ರಹಿಸುವ ಶಕ್ತಿ ಹೊಂದಿದ್ದಳು. ಒಂದು ದಿನ ಕೆರೆಯಿಂದ  ನೀರು ಸಂಗ್ರಹಿಸುವಾಗ ಆಕೆ ಸುಂದರ ಪುರುಷನೊಬ್ಬ ತನ್ನ ಪತ್ನಿಯರೊಂದಿಗೆ ಸ್ನಾನ ಮಾಡುವುದನ್ನು ನೋಡಿ ಆತನಲ್ಲಿ ಮೋಹಿತಳಾಗುತ್ತಾಳೆ. ಇದರಿಂದ ಸಿಟ್ಟುಗೊಂಡ ಜಮದಗ್ನಿ ಆಕೆಯ ತಲೆ ಕತ್ತರಿಸುವಂತೆ ತನ್ನ ಪುತ್ರರಿಗೆ ಹೇಳುತ್ತಾನೆ. ಹಿರಿಯ ನಾಲ್ಕು ಪುತ್ರರು ನಿರಾಕರಿಸಿದಾಗ ಅವರಲ್ಲಿರುವ ಪುರುಷತ್ವವನ್ನು ಸೆಳೆಯಲಾಯಿತಾದರೆ, ಕಿರಿಯ ಪುತ್ರ ಕೊಡಲಿಯನ್ನು ಕೈಗೆತ್ತಿ ತಂದೆಯ ಆದೇಶ ಶಿರಸಾ ಪಾಲಿಸುತ್ತಾನೆ. ಈ ಪುತ್ರನ ಹೆಸರೇ ಪರಶುರಾಮ, ವಿಷ್ಣುವಿನ ಐದನೇ ಅವತಾರ. ಈ ಘಟನೆಯ ನಂತರದ ಬೆಳವಣಿಗೆಗಳ ಬಗ್ಗೆ ವಿವಿಧ ವಿವರಣೆಗಳಿವೆ. ಸಂಸ್ಕøತ ಪುರಾಣದ ಪ್ರಕಾರ ತಂದೆಯ ಮಾತು ಪಾಲಿಸಿದ ಪರಶುರಾಮ ತಂದೆಯಿಂದ ವರವೊಂದನ್ನು ಪಡೆದು ತಾಯಿಯನ್ನು ಮರುಸೃಷ್ಟಿಸುತ್ತಾನೆ ಹಾಗೂ ಸಹೋದರರ ಪುರುಷತ್ವ ಮತ್ತೆ ಅವರಿಗೆ ದಯಪಾಲಿಸುತ್ತಾನೆ. ಆದರೆ ಜಾನಪದವಾಗಿ ಹರಿದು ಬಂದ ಕಥೆಯಂತೆ  ರೇಣುಕಾಳ ತಲೆ ನೂರು ತಲೆಗಳಾಗುತ್ತವೆ ಹಾಗೂ ವಿವಿಧ ಸ್ಥಳಗಳಲ್ಲಿ ಬಿದ್ದು ಅಲ್ಲೆಲ್ಲಾ ಎಲ್ಲಮ್ಮ ದೇವಳಗಳು ತಲೆಯೆತ್ತುತ್ತವೆ.

ಈ ಎಲ್ಲಮ್ಮ ದೇವಿಯ ಮುಖವಿರುವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ನಡೆದಾಗ ಆಧ್ಯಾತ್ಮಿಕ ಶಿಖರವೇರಿದ ಅನುಭವವಾಗುತ್ತದೆಯೆಂಬ ಪ್ರತೀತಿಯಿದೆ. ಪುರುಷತ್ವ ಕಳೆದುಕೊಂಡ ರೇಣುಕಾಳ ಪುತ್ರರು ಆಕೆಯ ಮೊದಲ ಅರ್ಚಕರಾಗುತ್ತಾರೆ. ಮಹಿಳೆಯರು ಈ ದೇವಿಯ ಸಂಪೂರ್ಣ ಭಕ್ತೆಯರಾಗಿ ಬಿಡುತ್ತಾರೆ.

ಇನ್ನೊಂದು ಕಥೆಯ ಪ್ರಕಾರ  ರೇಣುಕಾ  ಕೆಳ ಜಾತಿಯ ಮಹಿಳೆಯಾಗಿದ್ದು ಆಕೆಯ ಸಹಾಯಕ್ಕೆ ಸ್ಥಳಿಯ ಮಹಿಳೆಯೊಬ್ಬಳು ಬಂದಾಗ ಇಬ್ಬರ ತಲೆಯನ್ನೂ ಕಡಿಯಲಾಗುತ್ತದೆ.  ಮುಂದೆ ಪರಶುರಾಮ ತನ್ನ ತಾಯಿಗೆ ಮತ್ತೆ ಜೀವ ನೀಡಲ ಬಯಸಿದಾಗ ಮಹಿಳೆಯರಿಬ್ಬರ ತಲೆಗಳು ಅದಲು ಬದಲಾಗುತ್ತವೆ.

ಇನ್ನೊಂದು ಕಥೆಯ ಪ್ರಕಾರ ರೇಣುಕಾಳ ತಲೆ ಅಸ್ಪøಶ್ಯರು ಇರುವ ಪ್ರದೇಶದಲ್ಲಿ  ಬಿದ್ದ ಪರಿಣಾಮ ದೇವಿಯ ದೇಹ ಮತ್ತು ತಲೆಯನ್ನು ವಿವಿಧ ಸಮುದಾಯಗಳು  ಪೂಜಿಸುತ್ತವೆ.

ಇಲ್ಲಿನ ಸಂಪ್ರದಾಯ ಸ್ವಾರಸ್ಯಕರ. ದೇವಿ ಕೇವಲ ದೇವಳಕ್ಕೇ ಸೀಮಿತಗೊಳ್ಳದೆ ಆಕೆಯ  ಮುಖದ  ಮೂರ್ತಿಗಳನ್ನು  ಪುರುಷರು ಹಾಗೂ ಮಹಿಳೆಯರು ತಮ್ಮ ತಲೆಗಳಲ್ಲಿ ಹೊತ್ತು, ಡೋಲುಗಳನ್ನು ಬಡಿದು ಆವೇಶಗೊಂಡವರಂತೆ ಮನೆಮನೆಗೆ ಭೇಟಿ ನೀಡುತ್ತಾರೆ. ದೇವಿಯ ಲೋಹದ ತಲೆಯನ್ನು ಬುಟ್ಟಿ ಯಾ ಮಡಕೆಯೊಂದರ ಬಾಯಿಗೆ ಕಟ್ಟಲಾಗುತ್ತದೆ. ಅದಕ್ಕೆ ನವಿಲು ಗರಿಗಳನ್ನು ಸಿಕ್ಕಿಸಿ, ಹೂ, ಕಹಿಬೇವಿನ ಎಲೆಗಳು, ಲಿಂಬೆ ಹಣ್ಣು ಸಿಕ್ಕಿಸಿ ಅರಶಿನ ಮತ್ತು ಕುಂಕುಮ ಹಚ್ಚಲಾಗುತ್ತದೆ.

ಇಲ್ಲಿನ ಇನ್ನೊಂದು ವಿವಾದಾತ್ಮಕ ಹಾಗೂ ಸದ್ಯ ಕಾನೂನು ಬಾಹಿರ ಪದ್ಧತಿಯೆಂದರೆ ಮಗುವೊಂದನ್ನು ದೇವಿಗೆ ಅರ್ಪಿಸುವುದು. ಹೀಗೆ ದೇವರಿಗೆ ಅರ್ಪಿಸಲ್ಪಟ್ಟವರು ವಿವಾಹವಾಗುವ ಹಾಗಿಲ್ಲ. ಹೋದೆಡೆಯಲೆಲ್ಲ ದೇವಿಯನ್ನು ತಮ್ಮ ಜತೆಯಾಗಿಸಿ ಭಿಕ್ಷೆ  ಬೇಡಬೇಕು. ವರ್ಷಕ್ಕೆರಡು ಬಾರಿ ಹುಣ್ಣಿಮೆಯಂದು ಅವರು ಹತ್ತಿರದ ಕೆರೆಯಲ್ಲಿ ಸ್ನಾನ ಮಾಡಿ ದೇಹವನ್ನು ಕೇವಲ ಕಹಿಬೇವಿನ ಎಲೆಗಳಲ್ಲಿ ಮುಚ್ಚಿ  ತಲೆಯಲ್ಲಿ ದೇವಿಯ ಮೂರ್ತಿ ಹಿಡಿದು ದೇವಳದತ್ತ ಸಾಗಬೇಕು. ಇವರನ್ನು ಜೋಗಪ್ಪ ಹಾಗೂ ಜೊಗತಿಗಳೆಂದು ಕರೆಯುತ್ತಾರೆ. ಪರುಷರು ಕೂಡ ಮಹಿಳೆಯರಂತೆ  ಕಾಣುತ್ತಾರೆ ಹಾಗೂ ಹಿಜಡಾಗಳೆಂದು ಅವರನ್ನು ತಪ್ಪಾಗಿ ತಿಳಿಯುವ ಸಾಧ್ಯತೆಯೂ ಇದೆ. ಕೆಲವು ಭಕ್ತೆಯರನ್ನು ಲೈಂಗಿಕವಾಗಿ ಬಳಸುವ ಸಂಪ್ರದಾಯವೂ ಇದ್ದು ಇದು ಲೈಂಗಿಕ ಶೋಷಣೆಯೆಂಬ ಕೂಗು ಮುಗಿಲು ಮುಟ್ಟಿದ ಹಿನ್ನೆಲೆಯಲ್ಲಿ ಇಲ್ಲಿನ ಕೆಲವೊಂದು ಪದ್ಧತಿಗಳನ್ನು ಸರಕಾರ ಬಹಳ ಹಿಂದೆಯೇ ನಿಷೇಧಿಸಿದೆ.

ದೇವಿಯ ದರ್ಶನ ಪಡೆಯುವಾಗ ಹಲವಾರು ಪ್ರಶ್ನೆಗಳು ನನ್ನ ಮನದಲ್ಲಿ ಸುಳಿದವು – ಈ ರೇಣುಕಾ ಯಾರು, ಬಯಕೆಗಳನ್ನು ತುಂಬಿದ್ದವಳೇ ಅಥವಾ ಸಾತ್ವಿಕ ಪತ್ನಿಯೇ,  ದೇವಳದಲ್ಲಿರುವ ವಿಗ್ರಹವೇ ಅಥವಾ ಜನರು ತಲೆಯಲ್ಲಿ ಹೊತ್ತುಕೊಂಡು ಹೋಗುವಂತಹ ವಿಗ್ರಹವೇ ? ದೇವಿಯ ಮುಖದಲ್ಲಿ ಒಂದು ಲೋಹದ ಮೀಸೆಯನ್ನು ಗಮನಿಸಿ ಅದೇನೆಂದು ಅರ್ಚಕರಲ್ಲಿ ಕೇಳಿದೆ. ದೇವಿಯ ಸರ್ವಾಂತರ್ಯಾಮಿ ಶಕ್ತಿಯಿಂದ ಭಕ್ತರ ಮನವನ್ನು ಬೇರೆಡೆಗೆ ಸೆಳೆಯಲು ಅದನ್ನಿಡಲಾಗಿದೆ ಎಂದು ಆತ ಸಹಜವಾಗಿ ಹೇಳಿದರು.

ಬಯಕೆ ಎಲ್ಲಾ ನಿಯಮಗಳನ್ನೂ ಮೀರಿ ನಿಲ್ಲುತ್ತದೆ ಹಾಗೂ ಅದನ್ನು  ಹಿಂಸೆಯಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲದೆಂಬ ಪ್ರಕೃತಿಯ ಸತ್ಯವನ್ನು ಸಂಭಾಳಿಸಲು  ನಮ್ಮಿಂದ ಸಾಧ್ಯವಿಲ್ಲ ಎಂದು ನಮಗೆ ನೆನಪಿಸುವ ಯತ್ನ  ಇದೆಂದು ನನಗನಿಸುತ್ತದೆ.