`ಉದ್ಘಾಟನೆ ಭಾಗ್ಯ’ಕ್ಕಾಗಿ ಕಾಯುತ್ತಿದೆ ಪುನರ್ನವೀಕೃತ ಕಾರಂತ ನಿವಾಸ

ಪುತ್ತೂರು : ಕಡಲತಡಿಯ ಭಾರ್ಗವನೆಂದೇ ಖ್ಯಾತಿ ಪಡೆದಿರುವ ಜ್ಞಾನಪೀಠ ಪುರಸ್ಕೃತ ಕವಿ  ಶಿವರಾಮ ಕಾರಂತರ ಜನ್ಮ ಭೂಮಿ ಉಡುಪಿ ಜಿಲ್ಲೆಯ ಕೋಟ. ಆದರೆ ಪುತ್ತೂರಿನ ಅವರ ಕರ್ಮಭೂಮಿ ಪುನರುತ್ಥಾನಗೊಂಡಿದೆ. ಇದೀಗ ಪುತ್ತೂರಿನ ಬಾಲವನ ಮತ್ತೊಮ್ಮೆ ನವೀಕೃತಗೊಂಡು ಕಂಗೊಳಿಸುತ್ತಿದೆ.

ಶಿವರಾಮ ಕಾರಂತರ ಅವರ ಮನೆಯನ್ನು ಪಾರಂಪರಿಕ ವಿನ್ಯಾಸದಲ್ಲಿ ದುರಸ್ತಿ ಮಾಡಲಾಗಿದ್ದು, ಶೀಘ್ರದಲ್ಲೇ ಉದ್ಘಾಟನೆ ಭಾಗ್ಯ ಕಾಣಲಿದೆ.

ಶಿವರಾಮ ಕಾರಂತ ಅವರ ನಿವಾಸದ ನವೀಕರಣ ಕಾಮಗಾರಿಯನ್ನು ಸುಮಾರು 29 ಲಕ್ಷ ರೂಪಾಯಿ ವೆಚ್ಚದಲ್ಲಿ ಇಂಟೆಕ್ ಸಂಸ್ಥೆ ನಿರ್ವಹಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದಕ್ಕೆ ಅನುದಾನ ನೀಡಿತ್ತು. ಹೀಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರ ಹಸ್ತದಿಂದಲೇ ಇದನ್ನು ಉದ್ಘಾಟನೆಗೊಳಿಸಬೇಕೆನ್ನುವ ಇರಾದೆ ಸಮಿತಿಯದ್ದಾಗಿದ್ದು, ಅವರ ಆಗಮನಕ್ಕಾಗಿ ಇದೀಗ ನಿವಾಸ ಕಾಯುತ್ತಿದೆ.

ಪುತ್ತೂರಿನ ಈ ಬಾಲವನ ಶಿವರಾಮ ಕಾರಂತರ ಅಧ್ಯಯನ ಕೇಂದ್ರ. ಕಾರಂತರು ತಮ್ಮ ಬಹುತೇಕ ಅಂದರೆ ಸುಮಾರು 40 ವರ್ಷಗಳ ಕಾಲ ಇಲ್ಲಿ  ಕಳೆದಿದ್ದರು. ಕಾರಂತರನ್ನು ಕಲೆ, ಸಂಸ್ಕೃತಿಯ ಉತ್ತುಂಗಕ್ಕೇರಿಸಿದ ಕರ್ಮಭೂಮಿ ಈ ಪುತ್ತೂರು. ಇಷ್ಟೇ ಏಕೆ, ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ `ಮೂಕಜ್ಜಿಯ ಕನಸು’ ಕಾದಂಬರಿಯನ್ನು ಕೂಡಾ ಅವರು ಇದೇ ಬಾಲವನದಲ್ಲಿನ ನಿವಾಸದಲ್ಲಿ ಕುಳಿತು ಬರೆದಿದ್ದರು.

ಬಿಸಿಲು, ಗಾಳಿ, ಮಳೆಗೆ ಸಂಪೂರ್ಣ ಧರಾಶಾಹಿ ಹಂತದಲ್ಲಿದ್ದ ಅವರ ನಿವಾಸದ ದುಃಸ್ಥಿತಿಯ ಬಗ್ಗೆ ಮಾಧ್ಯಮಗಳು ನಿರಂತರವಾಗಿ ಸುದ್ದಿಯನ್ನು ಪ್ರಕಟಿಸಿದ್ದವು. ಮೂರು ವರ್ಷಗಳ ಬಳಿಕ ಕೊನೆಗೂ ಕಣ್ಣುಬಿಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರಂತರ ನಿವಾಸವನ್ನು ಅದೇ ಪಾರಂಪರಿಕ ಶೈಲಿಯನ್ನು ಉಳಿಸಿಕೊಂಡು ನಿರ್ಮಿಸುವ ನಿರ್ಧಾರ ಕೈಗೊಂಡಿತು. 29 ಲಕ್ಷ ರೂಪಾಯಿ ವೆಚ್ಚದಲ್ಲಿ ಇಂಟೆಕ್ ಸಂಸ್ಥೆ ಅತೀ ಸುಂದರವಾಗಿ ಇದರ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಇನ್ನು ಚಿಕ್ಕಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಈ ಬಾಲವನದಲ್ಲಿ ಮಕ್ಕಳ ಆಟೋಟ, ಕಾರ್ಯಕ್ರಮಗಳು ನಡೆಯಬೇಕೆನ್ನುವುದು ಅವರ ಇಚ್ಛೆಯಾಗಿತ್ತು.

ಮನೆಯ ಮೇಲ್ಛಾವಣಿ, ಗೋಡೆಗಳನ್ನು ಬೆಲ್ಲ ಹಾಕಿದ ಮಣ್ಣಿನೊಂದಿಗೆ ನಿರ್ಮಿಸಲಾಗಿದ್ದು, ಹಳೆಯ ವಿನ್ಯಾಸದಲ್ಲೇ ಪುನರ್ ನಿರ್ಮಾಣಗೊಂಡಿದೆ. ಕೆಲಸ ಕಾರ್ಯಗಳೆಲ್ಲಾ ಮುಗಿದಿದ್ದು, ಉದ್ಘಾಟನೆ ಮಾಡಿ ಸಾರ್ವಜನಿಕರ ವೀಕ್ಷಣೆಗೆ ತೆರೆದಿಡುವ ಕಾಲ ಸನ್ನಿಹಿತವಾಗಿದೆ. ಆದರೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅನುದಾನ ನೀಡಿದೆ ಎಂದು ರಾಜಕೀಯ ಸಚಿವರ ಆಗಮನಕ್ಕೆ ಕಾದು ಉದ್ಘಾಟನೆಯನ್ನು ಮುಂದೂಡುತ್ತಿರುವ ಕ್ರಮ ಸರಿಯಲ್ಲ ಎನ್ನುವುದು ಕಾರಂತರ ಅಭಿಮಾನಿಯಾಗಿರುವ ಮಂಜುನಾಥ್ ಅವರ ಅಭಿಪ್ರಾಯ.

ಸಚಿವೆಯೊಬ್ಬರಿಗೆ ಕಾದು ಇಡೀ ಕಾರ್ಯಕ್ರಮವನ್ನು ಮುಂದೂಡುತ್ತಾ ಬಂದಿರುವ ಕ್ರಮದ ವಿರುದ್ಧ ಇಲ್ಲಿನ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಈ ಮೂಲಕ ಕಾರಂತರ ನಿವಾಸವನ್ನು ಮತ್ತೆ ನಿರ್ಲಕ್ಷ್ಯ ಮಾಡುವಂತೆ ಕಾಣುತ್ತಿದೆ. ಈ ರೀತಿಯ ನಡೆ ಸರಿಯಲ್ಲ ಎನ್ನುತ್ತಾರೆ ಕಾರಂತರ ಅಭಿಮಾನಿ ಬಳಗದವರು.