ಈ ಕಟು ಸತ್ಯಗಳನ್ನು ನೆನಪಿಡಿ

ಬದುಕು ಬಂಗಾರ – 29

ನಮ್ಮ ಜೀವನವೊಂದು ಪಿಕ್ನಿಕ್ ಅಲ್ಲವೆಂಬುದನ್ನು ನಾವು ಮರೆಯಬಾರದು. ಹಲವು ಎಡರು ತೊಡರುಗಳು ಸಾಮಾನ್ಯ. ನಾವು ಬದುಕಬೇಕಿದ್ದರೆ ಈ ಅಡ್ಡಿ ಆತಂಕಗಳನ್ನೆಲ್ಲಾ ನಿವಾರಿಸಿ ಮುಂದಡಿಯಿಡಬೇಕು. ಕೆಲವೊಮ್ಮೆ ಜೀವನದಲ್ಲಿ ಎದುರಿಸುವ ಸಮಸ್ಯೆಗಳು ಸಹಿಸಲಸಾಧ್ಯವೆಂಬುದೂ ನಿಜ. ಆದರೂ ಜೀವನ ಮುಂದೆ ಸಾಗಲೇ ಬೇಕಲ್ಲವೇನು ? ಈ ಕೆಳಗ್ಗಿನ  ವಾಸ್ತವಗಳ ಬಗ್ಗೆ ನಿಮಗೆ ಅರಿವಿದ್ದರೆ ನೀವು ಆತ್ಮವಿಶ್ವಾಸ ಮತ್ತು ದೃಢತೆಯಿಂದ ಜೀವನದಲ್ಲಿ ಹೆಜ್ಜೆಯಿಡುತ್ತೀರಿ.

  • ಜೀವನ ನಾವೆಣಿಸಿದಷ್ಟು ಸುಲಭವಲ್ಲ : ಜೀವನದಲ್ಲಿ ಕಷ್ಟಕಾರ್ಪಣ್ಯಗಳು ಅನಿವಾರ್ಯ. ಇದನ್ನು ನಾವು ಒಪ್ಪಿಕೊಂಡಲ್ಲಿ ಮಾತ್ರ ನಾವು ನೆಮ್ಮದಿಯ ಈವನ ನಡೆಸಲು ಸಾಧ್ಯ. ಎಲ್ಲಾ ಕಾಲದಲ್ಲೂ ಋಣಾತ್ಮಕವಾಗಿ ಚಿಂತಿಸಲು ಸಾಧ್ಯವಿಲ್ಲ, ಸದಾ ಸಂತೋಷದಿಂದಿರಲೂ ಸಾಧ್ಯವಿಲ್ಲವೆನ್ನುವುದು ಕಟು ಸತ್ಯ.
  • ವೈಫಲ್ಯತೆ ಕಾಡಬಹುದು : ಜೀವನದಲ್ಲಿ ಹಲವಾರು ಬಾರಿ ವೈಫಲ್ಯಗಳು ನಮ್ಮನ್ನು ಎದೆಗುಂದಿಸಬಹುದು. ಆದರೆ ಅವುಗಳಿಂದ ದೂರ ಓಡದೆ ಧೈರ್ಯದಿಂದ ಮುನ್ನುಗ್ಗಿದಾಗ  ಮಾತ್ರ ಜೀವನ ಅರ್ಥಪೂರ್ಣ.
  • ನಮಗೆ ತಿಳಿಯಬೇಕಾಗಿದ್ದು ಬಹಳಷ್ಟು ಇದೆ : ಹೌದು, ಇದು ನಿಜ. ಆದರೆ ಎಷ್ಟೋ ಬಾರಿ ನಾವು ಇತರರಿಂದ ಪಾಠ ಕಲಿಯಲು ಬಯಸುವುದಿಲ್ಲ. ಹೊಸ ವಿಚಾರಗಳಿಗೆ ನಿಮ್ಮ ಮನಸ್ಸನ್ನು ಯಾವತ್ತೂ ತೆರೆದಿಡಿ.
  • ನಾಳೆ ಇಲ್ಲದೇ ಇರಬಹುದು : ಇದೊಂದು ಕಷ್ಟಕರವಾದ ಸತ್ಯ. ಎಲ್ಲರೂ ನಾಳೆಗಾಗಿ ಏನಾದರೂ ಯೋಜನೆ ಹಾಕಿಕೊಂಡಿದ್ದರೂ ಕೆಲವೊಮ್ಮೆ ಆ ನಾಳೆಯನ್ನು ಅವರು ಕಾಣದೇ ಇರಬಹುದು. ವರ್ತಮಾನ ಕಾಲದಲ್ಲಿ ಜೀವಿಸಿ, ಆನಂದಿಸಿ.
  • ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ :  ನಾವು ಜೀವನದಲ್ಲಿ ಎಲ್ಲವನ್ನೂ ನಿಯಂತ್ರಿಸಲು ಬಯಸುತ್ತೇವೆ. ಆದರೆ ಅದು ಅಸಾಧ್ಯ. ಉದಾಹರಣೆಗೆ ನಮ್ಮ ದೇಹದ ಕಾರ್ಯಾಚರಣೆಯ ಮೇಲೆಯೇ ನಮಗೆ ನಿಯಂತ್ರಣವಿರುವುದಿಲ್ಲ. ಹೃದಯದ ಬಡಿತ, ಕೂದಲಿನ ಬೆಳವಣಿಗೆಯನ್ನು ನಾವು ನಿಯಂತ್ರಿಸಲಾಗದು. ಅಂತೆಯೇ ನಮಗೆ ನಿಯಂತ್ರಿಸಲಾಗದ ವಸ್ತುಗಳ ಬಗ್ಗೆ ಯೋಚಿಸುವ ಬದಲು ನಾವು ನಿಯಂತ್ರಿಸಬಹುದಾದಂತಹ ವಿಚಾರಗಳ ಬಗ್ಗೆ ಮಾತ್ರ ಗಮನ ನೀಡಬೇಕು.
  • ನಿಮ್ಮನ್ನು ಇಷ್ಟ ಪಡದವರೂ ಇದ್ದಾರೆ : ಪ್ರತಿಯೊಬ್ಬರನ್ನೂ ಸಂತೋಷ ಪಡಿಸಲು ನಿಮ್ಮಿಂದ ಸಾಧ್ಯವಿಲ್ಲ. ನಿಮಗಿಂತ ಭಿನ್ನವಾಗಿ ಯೋಚಿಸುವವರಿಗೆ ನಿಮ್ಮ  ಧೋರಣೆ ಇಷ್ಟವಾಗದೇ ಇರಬಹುದು, ಆದರೆ ನೀವು ಮಾತ್ರ ನಿಮ್ಮ ಹೃದಯದ ಕರೆಗೆ ಓಗೊಡಿ.