ಧರ್ಮಕ್ಷೇತ್ರಗಳು ದಾನ ಮಾಡಬೇಕೆ ಹೊರತು ಸಾಲ ವ್ಯವಹಾರ ಅಲ್ಲ

ಸಮಾಲೋಚನಾ ಸಭೆಯಲ್ಲಿ ನರೇಂದ್ರ ನಾಯಕ್ ಮಾತಾಡಿದರು

ನಮ್ಮ ಪ್ರತಿನಿಧಿ ವರದಿ
ಬೆಳ್ತಂಗಡಿ : “ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವವರು ತಾವು ಕಾನೂನಿಗೆ, ಸಂವಿಧಾನಕ್ಕೆ ಅತೀತರು ಎಂದು ಭಾವಿಸಿದ್ದಾರೆ. ಇದು ತಪ್ಪು ಅಭಿಪ್ರಾಯ. ಇಂತಹ ವ್ಯಕ್ತಿಗಳು ನ್ಯಾಯದ ಕಟಕಟೆಗೆ ಬರುವುದು ತಪ್ಪು ಎಂಬ ಭಾವನೆಯೂ ಸಲ್ಲದು. ಜನಪ್ರತಿನಿಧಿಗಳು ಜನರಿಗೆ ಉತ್ತರಬಾಧ್ಯರು. ದೈವಾಂಶಸಂಭೂತರೆಂದು ಕರೆಸಿಕೊಳ್ಳುವ ವ್ಯಕ್ತಿಗಳ ಕಾಲಿಗೆ ಇವರು ಅಡ್ಡ ಬೀಳುವುದರಿಂದ ಜನರಿಗೆ ತಪ್ಪು ಸಂದೇಶ ತಲುಪುತ್ತದೆ. ಧರ್ಮಕ್ಷೇತ್ರಗಳು ದಾನ ಮಾಡಬೇಕೆ ಹೊರತು ಸಾಲ ವ್ಯವಹಾರ ಅಲ್ಲ” ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಇವರು ಗುರುವಾಯನಕೆರೆಯಲ್ಲಿ ನಾಗರಿಕ ಸೇವಾ ಟ್ರಸ್ಟ್ ಕಚೇರಿ ಆವರಣದಲ್ಲಿ ಜ 7ರಂದು ನಡೆದ ಜಂಟಿ ಕ್ರಿಯಾ ಸಮಿತಿಯ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತಾನಾಡಿದರು.
ವಿಚಾರವಾದಿ ನರೇಂದ್ರ ನಾಯಕ್ ಮಾತಾಡುತ್ತಾ, “ಸಂವಿಧಾನ ಪ್ರಕಾರ ಎಲ್ಲರೂ ಸಮಾನರು. ನಮಗೆ ವ್ಯಕ್ತಿ ಕೊಡುವ ನ್ಯಾಯ ಬೇಕಾಗಿಲ್ಲ. ದೇಶದ ಕಾನೂನು ನೀಡುವ ನ್ಯಾಯಬೇಕಾಗಿದೆ. ಮೌಢ್ಯತೆಯ ಪ್ರಚಾರಕ್ಕೆ ವಿಜ್ಞಾನವನ್ನು ಬಳಸಿ ಸಮಾಜವನ್ನು ನಿರಂತರವಾಗಿ ಶೋಷಿಸುತ್ತಿದ್ದರೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರುವುದು ತಪ್ಪು. ಅನ್ಯಾಯವನ್ನು ಸಹಿಸಿಕೊಳ್ಳಬೇಕಾಗಿಲ್ಲ. ಒಟ್ಟಿಗೆ ಹೋರಾಡೋಣ” ಎಂದರು.
ಎಸ್ಕೆಡಿಆರ್ಡಿಪಿ ಅಂತಹ ಸೇವಾಸಂಸ್ಥೆ ಮೈಕ್ರೋಫೈನಾನ್ಸ್ ನಡೆಸುವ ಅಗತ್ಯ ಏನಿದೆ ? ಇವರ ಸಾಲ ವ್ಯವಹಾರದಿಂದಾಗಿ ಸಾವಿರಾರು ಕುಟುಂಬಗಳ ನೆಮ್ಮದಿ ಹಾಳಾಗಿ ಆತ್ಮಹತ್ಯೆ ಮಾಡುವಂತಹ ಸ್ಥಿತಿ ಬಂದಿದೆ. ಸರಕಾರವು ಈ ವಿಚಾರ ತಿಳಿದಿದ್ದರೂ ಮೌನವಾಗಿರುವುದು ಖಂಡನೀಯ. ಈ ಬಗ್ಗೆ ಸಾವತ್ರ್ರಿಕ ಹೋರಾಟ ನಡೆಸಬೇಕಾಗಿದೆ”. ಎಂದು ಗ್ರಾಮೀಣ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಕುಮಾರ್ ಎಸ್ ಹೇಳಿದರು. ನಮ್ಮ ಒಕ್ಕೂಟ ಮತ್ತು ಪ್ರಜಾಧಿಕಾರ ವೇದಿಕೆ ಕರ್ನಾಟಕದ ಮೂಲಕ ರಾಜ್ಯಾದ್ಯಂತ ಸತ್ಯ ಸಂಗತಿ ಪ್ರಚಾರ ಮಾಡಿ ಜಾಗೃತಿ ಮೂಡಿಸಲಾಗುವುದು ಎಂದರು.
ಸಮಿತಿಯ ಪ್ರಧಾನ ಸಂಚಾಲಕ, ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು. `ಅನಾವರಣ’ ಶೀರ್ಷಿಕೆಯ ಹೆಗ್ಗಡೆ ಸಂಸ್ಥಾನ ಎಷ್ಟು ಸ್ವಚ್ಛ ? ಬಿಚ್ಚಿಟ್ಟ ಸತ್ಯ’ ಕಿರುಪುಸ್ತಕ ಮತ್ತು ಧರ್ಮಸೂಕ್ಷ್ಮ ಭಾಗ-2 ನ್ನು ವಿತರಿಸುವುದರೊಂದಿಗೆ ಇದರಲ್ಲಿರುವ ಸತ್ಯಸಂಗತಿಗಳ ಮತ್ತು ದಾಖಲೆಗಳ, ಆದೇಶಗಳ, ಹೆಗ್ಗಡೆ ಸಂಸ್ಥೆ ವಿರುದ್ಧ ದಾಖಲಾದ 3 ಕ್ರಿಮಿನಲ್ ಖಾಸಗಿ ದೂರುಗಳ ಮಾಹಿತಿಯನ್ನು ನೀಡಿದರು.
ಆದಿವಾಸಿಗಳ ರಾಷ್ಟ್ರೀಯ ಮಹಾಕೂಟದ ರಾಷ್ಟ್ರಿಯ ಸಂಚಾಲಕ ರಾಯ್ ಡೇವಿಡ್ ಈ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಮುಂದಿನ ಚುನಾವಣೆಯಲ್ಲಿ ಹೆಗ್ಗಡೆ ಸಂಸ್ಥಾನದ ಅಕ್ರಮಗಳ ಕಾನೂನುಬಾಹಿರ ಕೃತ್ಯಗಳ ಕುರಿತು ತನಿಖೆಗಳನ್ನು ತ್ವರಿತಗೊಳಿಸುವ ಹಕ್ಕೊತ್ತಾಯಗಳಿಗೆ ಬೆಂಬಲ ನೀಡಲು ರಾಜಕೀಯ ಪಕ್ಷಗಳನ್ನು, ಅಭ್ಯರ್ಥಿಗಳನ್ನು ಆಗ್ರಹಿಸಲು ಪ್ರಚಾರಾಂದೋಲದ ಕುರಿತು ಚರ್ಚಿಸಲಾಯ್ತು.
ಸಾಹಿತಿ ಅನಂತರಾಂ ಬಂಗಾಡಿ, ಸಾಮಾಜಿಕ ಕಾರ್ಯಕರ್ತ ಐ ಎಲ್ ಪಿಂಟೋ ಕೊಯ್ಯೂರು, ಚಿಂತನಾ ಫೌಂಡೇಷನ್ ಅಜ್ಜಂಪುರದ ಪೂವಪ್ಪ, ಕೃಷಿಕರ ವೇದಿಕೆಯ ಮಾಜಿ ಅಧ್ಯಕ್ಷ ಯಶೋಶ್ಚಂದ್ರ ಪಿ ಆರ್ ಏನೇಕಲ್ಲು ಸೌಜನ್ಯಾಳ ತಾಯಿ ಕುಸುಮಾವತಿ ಧರ್ಮಸ್ಥಳ ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಮುಮ್ತಾಜ್ ಮತ್ತಿತರರು ಅಭಿಪ್ರಾಯ ಮಂಡಿಸಿದರು.
ಸಭೆಯಲ್ಲಿ ವಕೀಲ ಕೆ ಭಾಸ್ಕರ ಹೊಳ್ಳ, ರಂಜನ್ ರಾವ್ ಯರ್ಡೂರ್, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷೆ, ವಿದ್ಯಾ ನಾಯಕ್, ಟ್ರಸ್ಟ್ ಉಪಾಧ್ಯಕ್ಷ ಕೆ ರಮಾನಂದ ಸಾಲಿಯಾನ್, ಪ್ರಜಾಪ್ರಭುತ್ವ ವೇದಿಕೆಯ ತಾಲೂಕು ಸಂಚಾಲಕ ಅನಿಲ್ ಕುಮಾರ್, ಮಲೆಕುಡಿಯರ ಸಮಾಜ ಸುಧಾರಣಾ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ನಿಡ್ಲೆ, ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ ಎಚ್, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ, ಸೋಮ ಕೆ, ಮತ್ತು ಬಾಬು ಎ, ಅಂಡಿಂಜೆ ಹೋರಾಟ ಸಮಿತಿಯ ಅಶೋಕ ದೇವಾಡಿಗ, ಇಬ್ಬರು ಮಾಜಿ ಜಿ ಪಸದಸ್ಯರು ಸಹಿತ 80ಕ್ಕೂ ಹೆಚ್ಚು ಮುಖ್ಯಸ್ಥರು ಭಾಗವಹಿಸಿದ್ದರು.
ನೂರಾರು ಸಂಘಟನೆಗಳು ಬೆಂಬಲ ಸೂಚಿಸಿ ಇ-ಮೈಲ್, ವಾಟ್ಸಪ್ ಮಾಡಿದ್ದಾರೆಂದು ತಿಳಿಸಲಾಯ್ತು.