ವಿಮಾನ ವಿಳಂಬವಾದರೆ ಟಿಕೆಟ್ ಹಣ ಮರಳಿಸಿ : ಡಿಜಿಸಿಎಗೆ ಸುಪ್ರೀಂ ಸಲಹೆ

 ನವದೆಹಲಿ : ವಿಮಾನಯಾನಗಳು ವಿಳಂಬಗೊಂಡಾಗ ಪ್ರಯಾಣಿಕರಿಗೆ ಅನಗತ್ಯ ತೊಂದರೆ ತಪ್ಪಿಸುವ ಸಲುವಾಗಿ ನೀತಿಯೊಂದನ್ನು ರೂಪಿಸಬಹುದೇ ಎಂಬುದನ್ನು ಪರಿಶೀಲಿಸುವಂತೆ  ವಿಮಾನಯಾನ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ. ಇಂತಹ ಒಂದು ನೀತಿ ಜಾರಿಗೊಂಡಿದ್ದೇ ಆದಲ್ಲಿ ವಿಮಾನಯಾನವು ಒಂದು ಗಂಟೆ  ವಿಳಂಬವಾದರೂ ಸಂಕಷ್ಟಕ್ಕೀಡಾದ ಪ್ರಯಾಣಿಕರು ಒಂದೋ ಪರಿಹಾರ ಮೊತ್ತ ಇಲ್ಲವೇ ತಮ್ಮ ಟಿಕೆಟ್ ಹಣವನ್ನು  ಹಿಂದಕ್ಕೆ ಪಡೆಯಬಹುದಾಗಿದೆ.

ಈ ಹಿಂದೆ 2016ರಲ್ಲಿ ನಿರ್ದೇಶನಾಲಯವು ವಿಮಾನಯಾನ ವಿಳಂಬಗೊಂಡ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ರೂಪಿಸಿದ್ದರೂ ಅವುಗಳು ವಿಮಾನ ಸಂಸ್ಥೆಗಳಿಗೇ ಅನುಕೂಲಕರವಾಗಿವೆಯೇ ಹೊರತು ಪ್ರಯಾಣಿಕರಲ್ಲ ಎಂದು ದೂರಿ ನನಿತಾ ಶರ್ಮ ಎಂಬವರು ದಾಖಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಮೇಲಿನಂತೆ ಹೇಳಿದೆ.

ಹೊಸ ನೀತಿ ರಚಿಸುವ ಕುರಿತು ನಿರ್ದೇಶನಾಲಯ ನಾಲ್ಕು ವಾರಗಳೊಳಗಾಗಿ ಮಾಹಿತಿಯೊದಗಿಸಬೇಕೆಂದು  ಜಸ್ಟಿಸ್ ಮದನ್ ಬಿ ಲೋಕೂರ್ ನೇತೃತ್ವದ ಪೀಠ ಹೇಳಿದೆ. “ಏನಾದರೂ ಮಾಡಲೇಬೇಕು. ಪ್ರಯಾಣಿಕರಿಗೆ ಕಿರುಕುಳ ನೀಡಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ. ಈಗಿನ ನಿಯಮದ ಪ್ರಕಾರ ವಿಮಾನಯಾನವೊಂದು ಒಂಬತ್ತು ಗಂಟೆ ಯಾ ಅದಕ್ಕಿಂತ ಹೆಚ್ಚು ವಿಳಂಬಗೊಂಡಲ್ಲಿ ಮಾತ್ರ ಸಂಸ್ಥೆಗಳು  ಟಿಕೆಟ್ ಹಣವನ್ನು ಪ್ರಯಾಣಿಕರಿಗೆ ಹಿಂದಿರುಗಿಸಬೇಕಿದೆ.