ಡಿಜಿಪಿ ಹುದ್ದೆ ರೇಸಿನಲ್ಲಿ ರೆಡ್ಡಿ, ಕಿಶೋರ್ ಚಂದ್ರ,

ಬೆಂಗಳೂರು : ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರು ಅಕ್ಟೋಬರ್ 31ರಂದು ನಿವೃತ್ತರಾಗಲಿರುವುದರಿಂದ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಅಧಿಕಾರಿಗಾಗಿ ಶೋಧ ಆರಂಭವಾಗಿದೆ. ಸದ್ಯ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳು ಈ ಹುದ್ದೆಗೆ ಕೇಳಲಾರಂಭಿಸಿವೆ. ಅಗ್ನಿ ಮತ್ತು ತುರ್ತು ಸೇವೆಗಳು, ಹೋಂಗಾಡ್ರ್ಸ್, ಸಿವಿಲ್ ಡಿಫೆನ್ಸ್ ಹಾಗೂ ರಾಜ್ಯ ಆಫತ್ತು ನಿರ್ವಹಣಾ ಪಡೆಯ ಡಿಜಿಪಿ ನೀಲಮಣಿ ಎನ್ ರಾಜು, ಸಿಐಡಿ ಡಿಜಿಪಿ ಎಚ್ ಸಿ ಕಿಶೋರ್ ಚಂದ್ರ ಹಾಗೂ ಎಸಿಬಿ ಡಿಜಿಪಿ ಎಂ ಎನ್ ರೆಡ್ಡಿ ಅವರ ಹೆಸರುಗಳು ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಕೇಳಿ ಬರುತ್ತಿವೆ.

ಆದರೆ ಈ ಮೂವರಲ್ಲಿ ನೀಲಮಣಿ ಅವರು ಕೇಂದ್ರ ಸೇವೆಗೆ ಹೆಚ್ಚು ಆಸಕ್ತರಾಗಿರುವುದರಂದ ಕಿಶೋರ್ ಚಂದ್ರ ಅಥವಾ ರೆಡ್ಡಿ ಈ ಇಬ್ಬರಲ್ಲಿ ಒಬ್ಬರು ಈ ಅತ್ಯುನ್ನತ ಹುದ್ದೆಗೆÉ ಏರುವ ಸಾಧ್ಯತೆಯಿದೆ.

ನೀಲಮಣಿ ಅವರನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮಹಾನಿರ್ದೇಶಕರನ್ನಾಗಿ ನೇಮಿಸುವ ನಿರೀಕ್ಷೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 2016ರಲ್ಲಿ ತಮ್ಮ ಬದಲು ದತ್ತಾ ಅವರನ್ನು ಡಿಜಿಪಿ ಹುದ್ದೆಗೆ ಸರಕಾರ ನೇಮಿಸಿರುವುದರಿಂದ ನೀಲಮಣಿ ಅವರಿಗೆ ಅಸಮಾಧಾನವುಂಟಾಗಿರುವುದೇ ಅವರು ಕೇಂದ್ರ ಸೇವೆಗೆ ಆಸಕ್ತಿ ವಹಿಸಲು ಕಾರಣವೆನ್ನಲಾಗಿದೆ.

ಎಂ ಎನ್ ರೆಡ್ಡಿ ಆರಂಭದಲ್ಲಿ ಕೆಜಿಎಫ್ ಹಾಗೂ ಮಂಡ್ಯ ಎಸ್ಪಿಯಾಗಿದ್ದರೆ ನಂತರ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಹಾಗೂ ಗುಪ್ತಚರ ಡಿಜಿಪಿ ಆಗಿ ಸೇವೆ ಸಲ್ಲಿಸಿದ್ದಾರೆ. ಮೇಲಾಗಿ ಅವರಿಗೆ ರಾಜ್ಯದ ಪ್ರಭಾವಿ ಸಚಿವರೊಬ್ಬರ ಬೆಂಬಲವಿದೆಯೆನ್ನಲಾಗುತ್ತಿದೆ.

ಅತ್ತ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರು ಕಿಶೋರ್ ಚಂದ್ರ ಅವರನ್ನು ಡಿಜಿಪಿ ಹುದ್ದೆಗೆ ಏರಿಸಬೇಕೆಂದು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದಾರೆ. ಅವರು ಮುಖ್ಯಮಂತ್ರಿಯ ತವರು ಜಿಲ್ಲೆ ಮೈಸೂರಿನವರೆಂಬುದೂ ಇಲ್ಲಿ ಪ್ರಮುಖವಾಗುತ್ತದೆ.