ಕೋರ್ಟ್ ಆದೇಶ ಪಾಲಿಸದ ನಗರ ಪೊಲೀಸ್ ವಿರುದ್ಧ ಹೈ ಮೆಟ್ಟಿಲೇರಿದ ರಿಕ್ರಿಯೇಶನ್ ಅಸೋಸಿಯೇಶನ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರ್ನಾಟಕ ಸೊಸೈಟಿ ನೋಂದಾವಣಿ ಕಾಯ್ದೆ-1960ರಡಿ ನೋಂದಾಯಿತ ರಿಕ್ರಿಯೇಶನ್ ಕ್ಲಬ್ಬುಗಳನ್ನು ಹೈಕೋರ್ಟ್ ತಡೆಯಾಜ್ಞೆ ಹೊರತಾಗಿಯೂ ಮಂಗಳೂರು ನಗರ ಪೊಲೀಸರು ಬಲವಂತವಾಗಿ ಬಂದ್ ಮಾಡಿಸುತ್ತಿದ್ದಾರೆಂದು ಆರೋಪಿಸಿದ ಇದರ ಅಸೋಸಿಯೇಶನ್ ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದೆ.

ಸೋಮವಾರದಂದು ನಿರ್ದಿಷ್ಟ ಸಂಘಟನೆಯೊಂದು ನಗರದಲ್ಲಿ ರಿಕ್ರಿಯೇಶನ್ ಕ್ಲಬ್ಬುಗಳಲ್ಲಿ ಅಕ್ರಮ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನೆಗೆ ಮುನ್ನವೇ ನಗರದ ಬಹುತೇಕ್ ರಿಕ್ರಿಯೇಶನ್ ಕ್ಲಬ್ಬುಗಳನ್ನು ಬಂದ್ ಮಾಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ರಿಕ್ರಿಯೇಶನ್ ಕ್ಲಬ್ ಸದಸ್ಯರು, “ನಗರದ ಎಲ್ಲಾ ರಿಕ್ರಿಯೇಶನ್ ಕ್ಲಬ್ಬುಗಳು ನೋಂದಾವಣಿಯಾಗಿವೆ. ನೋಂದಾವಣಿ ಸಂದರ್ಭ ಕ್ಲಬ್ಬಿನಲ್ಲಿ ನಡೆಯುವ ಪ್ರತಿ ಮನರಂಜನಾ ಚಟುವಟಿಕೆಗಳನ್ನು ಉಲ್ಲೇಖಿಸಿದ್ದೇವೆ. ಸೀಸಿ ಟೀವಿಗಳನ್ನು ಅಳವಡಿಸಲಾಗಿದೆ. ಜೊತೆಗೆ ನಿಯಾಮವಳಿ ಪ್ರಕಾರ ಅಧ್ಯಕ್ಷರು, ಸದಸ್ಯರನ್ನು ನೇಮಿಸಲಾಗಿದೆ. ಆದರೆ ಯಾರೋ ಆರೋಪಿಸಿದರೆಂದು ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಪೊಲೀಸರು ಒತ್ತಡಕ್ಕೆ ಸಿಲುಕಿ ಕಾರ್ಯಾಚರಣೆ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಸೊಸೈಟಿ ಕಾಯ್ದೆಯಡಿ ನೋಂದಾಯಿತ ಕ್ಲಬ್ಬಿನಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲು ಯಾವುದೇ ರೀತಿಯಲ್ಲಿ ಅಡ್ಡಿಪಡಿಸಬಾರದೆಂದು ಕೋರಿ 2015ರಲ್ಲಿ ವಿವಿಧ ಕ್ಲಬ್ ಸದಸ್ಯರು (ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ಮಂಗಳೂರು ಪೊಲೀಸ್ ಕಮಿಷನರ್, ಡಿಸಿಪಿ, ಎಸಿಪಿ ಮತ್ತು ಆಯಾ ಠಾಣಾ ವ್ಯಾಪ್ತಿಯ ಇನಸ್ಪೆಕ್ಟರ್ ನಡುವೆ)ಸಲ್ಲಿಸಿದ ರಿಟ್ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಪ್ರತೀ ಕ್ಲಬ್ಬಿನಲ್ಲಿ ಸೀಸಿ ಟೀವಿ ಅಳವಡಿಸಬೇಕು. ಪೊಲೀಸರು ನಿಯಮಿತವಾಗಿ ಯಾವುದೇ ಅಕ್ರಮ ನಡೆಯದಂತೆ ಪರಿಶೀಲಿನೆ ನಡೆಸಬೇಕು ಎಂಬಿತ್ಯಾದಿ ಮಾರ್ಗದರ್ಶನಗಳನ್ನು ನೀಡಿತ್ತು.

ಈ ಆದೇಶದನ್ವಯ ಮಂಗಳೂರು ಪೊಲೀಸರು ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಪ್ರಾಸಿಕ್ಯೂಟರ್ (ಪೊಲೀಸರ ಕಾನೂನು ಸಲಹೆಗಾರರು) ಜೊತೆ ಕಾನೂನು ಸಲಹೆ ಪಡೆದು ರಿಕ್ರಿಯೇಶನ್ ಕ್ಲಬ್ ನಡೆಸಲು ಅನುಮತಿ ನೀಡಿದ್ದರು. ಇದರ ಆಧಾರದಲ್ಲಿ ವಿವಿಧ ಕ್ಲಬ್ಬುಗಳು ಚಾಲ್ತಿಯಲ್ಲಿದ್ದವು.