ಮಂಗಳೂರು ಕಸ್ಟಮ್ಸ್ ಕಮಿಷನರೇಟಿನಿಂದ ದಾಖಲೆ ಆದಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಕಸ್ಟಮ್ಸ್ ಕಮಿಷನರೇಟ್ 2016-17ರಲ್ಲಿ ಆದಾಯ ಸಂಗ್ರಹದಲ್ಲಿ ದಾಖಲೆಯ ಸಾಧನೆಯನ್ನೇ ಮಾಡಿದೆ. 2016-17ನೇ ವರ್ಷದಲ್ಲಿ ರೂ 1,648.27 ಕೋಟಿ ಆದಾಯ ಸಂಗ್ರಹಿಸಿದ್ದು, 2015-16 ವರ್ಷಕ್ಕೆ ಹೋಲಿಸಿದರೆ ಶೇಕಡಾ 21ರಷ್ಟು ಹೆಚ್ಚಾದಂತಾಗಿದೆ. ಕಳೆದ 8 ವರ್ಷಗಳಲ್ಲಿ ಕಮಿಷನರೇಟ್ ಆದಾಯ ಶೇ 320ರಷ್ಟು ಹೆಚ್ಚಳವಾಗಿದೆ.

ಇಲಾಖೆ ಕೈಗೊಳ್ಳುವ ವ್ಯಾಪಾರ ಪ್ರಕ್ರಿಯೆಗೆ ಅನುಕೂಲವಾಗಲು ಸಿಂಗಲ್ ವಿಂಡೋ ಇಂಟರಫೇಸ್, ಇಲೆಕ್ಟ್ರಾನಿಕ್ ಡಾಟಾ ಇಂಟರಚಾರ್ಜ್, ಆಥರೈಸಡ್ ಇಕನಾಮಿಕ್ ಆಪರೇಟರ್ ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಅನಗತ್ಯ ಸಮಯ ಮತ್ತು ವೆಚ್ಚವನ್ನು ಕಡಿಮೆಗೊಳಿಸುವ ಆಶಯದಲ್ಲಿ ಮುಂದುವರಿದಿದೆ ಎಂದು ಕಮಿಷನರ್ ಎಂ ಸುಬ್ರಹ್ಮಣ್ಯ ಹೇಳಿದ್ದಾರೆ.

ವ್ಯಾಪಾರದ ಇತರ ಸೌಲಭ್ಯಗಳೆಂದರೆ ವ್ಯಾಪಾರ ಮತ್ತು ಸಮಸ್ಯೆ ಪರಿಹಾರಗಳನ್ನು ತ್ವರಿತಗೊಳಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು ಪ್ರಯಾಣಿಕರಲ್ಲಿ ಶೇ 97.62ರಷ್ಟು ಪ್ರಯಾಣಿಕರು ಗ್ರೀನ್ ಚಾನೆಲ್ ಆರಿಸಿಕೊಂಡಿದ್ದಾರೆ. ಈ ಬಾರಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಬಿಡುಗಡೆಗೊಳಿಸಿರುವ ಆನ್ಲೈನ್ ಕಸ್ಟಮ್ಸ್ ಗೈಡಿಗೆ ಪ್ರಯಾಣಿಕರು, ಟ್ರಾವೆಲ್ ಏಜೆಂಟ್ಸ್ ಮತ್ತು ಪಾಲುಬಂಡವಾಳದಾರರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಕಮಿಷನರೇಟ್ ಸ್ವೀಕರಿಸಿದ್ದಾರೆ.

ಕಮಿಷನರೇಟ್ ಇದೀಗ ವ್ಯವಹಾರ ಇನ್ನೂ ಅಭಿವೃದ್ಧಿಪಡಿಸಲು ಮತ್ತು ಗುಣಮಟ್ಟದ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಪ್ರಮಾಣ ಪತ್ರ ಪಡೆಯುವ ಯತ್ನವನ್ನು ಮಾಡುತ್ತಿದೆ ಎಂದು ಎಂ ಸುಬ್ರಹ್ಮಣ್ಯ ಹೇಳಿದ್ದಾರೆ.