ಈ ಬಾರಿ ಎಸ್ಸೆಸೆಲ್ಸಿಯಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ಬರೆಯಲಿದ್ದಾರೆ ತುಳು ಪರೀಕ್ಷೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ತುಳು ಭಾಷೆಯ ಪರೀಕ್ಷೆಯನ್ನು ಬರೆಯಲಿದ್ದಾರೆ. ಮಾರ್ಚ್ 30 ರಿಂದ ಆರಂಭವಾಗಲಿರುವ ಬೋರ್ಡು ಪರೀಕ್ಷೆಗೆ ಜಿಲ್ಲೆಯ  ಸುಮಾರು 13 ಶಾಲೆಗಳ ಒಟ್ಟು 313 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

“ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಯತ್ನದ ಫಲವಾಗಿ ಹೆಚ್ಚಿನ ವಿದ್ಯಾರ್ಥಿಗಳು ಈ ಬಾರಿ ತುಳು ಭಾಷೆಯನ್ನು ಮೂರನೇ ಭಾಷೆಯಾಗಿ ಆಯ್ದುಕೊಂಡಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 12 ಪಟ್ಟು ಹೆಚ್ಚಳವಾಗಿದೆ. ತುಳು ಭಾಷೆ ಆಯ್ಕೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ವಿವಿಧ ರೀತಿಯ ತಂತ್ರೋಪಾಯಗಳನ್ನು ಕೈಗೊಳ್ಳಲಾಗಿದೆ. 10ನೇ ತರಗತಿಯಲ್ಲಿ ತುಳು ಭಾಷೆಯನ್ನು ಮೂರನೇ ಭಾಷೆಯಾಗಿ ಆಯ್ದುಕೊಳ್ಳಲು ವಿದ್ಯಾರ್ಥಿಗಳನ್ನು ವಿವಿಧ ರೀತಿಯಲ್ಲಿ ಉತ್ತೇಜಿಸಲಾಯಿತು” ಎಂದು ತುಳು ಅಕಾಡೆಮಿ (ಕೆಎಸ್‍ಟಿಎ) ಅಧ್ಯಕ್ಷೆ ಎಂ ಜಾನಕಿ ಬ್ರಹ್ಮಾವರ ಹೇಳಿದ್ದಾರೆ.

“ಪರೀಕ್ಷೆ ಬರೆಯುತ್ತಿರುವ 313 ವಿದ್ಯಾರ್ಥಿಗಳಲ್ಲಿ 248 ವಿದ್ಯಾರ್ಥಿಗಳು ಪುತ್ತೂರು ತಾಲೂಕಿನವರು. ಇಲ್ಲಿ ತುಳು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 25ರಿಂದ 248ಕ್ಕೆ ಏರಿದೆ. ಇದಕ್ಕೆ ಕಾರಣ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಶಶಿಧರ್ ರೈ” ಎಂದು ಕೆ ಎಸ್ ಟಿ ಎ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಹೇಳಿದರು.

“ಪ್ರಸಕ್ತ ಉಡುಪಿ ಜಿಲ್ಲೆ ಸೇರಿದಂತೆ 20 ಶಾಲೆಗಳ ಆರರಿಂದ 10ನೇ ತರಗತಿಯ ಒಟ್ಟು 956 ವಿದ್ಯಾರ್ಥಿಗಳು ತುಳು ಭಾಷೆ ಕಲಿಯುತ್ತಿದ್ದಾರೆ” ಎಂದು ಚಂದ್ರಹಾಸ್ ರೈ ಹೇಳಿದರು.

ಶೇ 100 ಫಲಿತಾಂಶ

2015 ಮತ್ತು 2016ರಲ್ಲಿ ಶೇಕಡಾ 100 ಫಲಿತಾಂಶ ಪ್ರಕಟವಾಗಿದೆ. 2015ನೇ ಬ್ಯಾಚಿನಲ್ಲಿ ಪೊಂಪೈ ಸ್ಕೂಲಿನ ಸುಮಾರು 18 ವಿದ್ಯಾರ್ಥಿಗಳು ಮೊದಲ ಬಾರಿಗೆ ತುಳು ಪರೀಕ್ಷೆ ಬರೆದಿದ್ದು, ನೂರು ಫಲಿತಾಂಶ ಪ್ರಕಟವಾಗಿತ್ತು.

2016ನೇ ಬ್ಯಾಚಿನಲ್ಲಿ ಪುತ್ತೂರು ತಾಲೂಕಿನ 25 ವಿದ್ಯಾರ್ಥಿಗಳು ತುಳುಪರೀಕ್ಷೆ ಬರೆದಿದ್ದು, ನೂರು ಫಲಿತಾಂಶ ಪ್ರಕಟವಾಗಿದೆ.

ಈ ಬಾರಿ 2017ನೇ ಬ್ಯಾಚಿನಲ್ಲಿ 313 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.