ಶೀಘ್ರವೇ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸ್ವಾಗತ ಕೇಂದ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪೊಲೀಸ್ ಠಾಣೆಗೆ ತೆರಳುವ ದೂರುದಾರರನ್ನು ಪೊಲೀಸರು ತಮ್ಮ ದರ್ಪದ ನಡವಳಿಕೆ ಮೂಲಕ ವಿಚಾರಿಸುತ್ತಿದ್ದ ದೃಶ್ಯಗಳಿಗೆ ಇನ್ಮೇಲೆ ಅವಕಾಶ ಇರುವುದಿಲ್ಲ. ಯಾಕೆಂದರೆ ಇನ್ಮೇಲೆ ನಿಮ್ಮನ್ನು ಸ್ವಾಗತಿಸಿ, ಅಕ್ಕರೆಯಿಂದ ಮಾತನಾಡುವ ಸ್ವಾಗತಕಾರಿಣಿಗಳು ಪೊಲೀಸ್ ಠಾಣೆಗಳಲ್ಲಿ ಕಂಡು ಬರಲಿದ್ದಾರೆ. ಪ್ರತಿ ಪೊಲೀಸ್ ಠಾಣೆಗಳಲ್ಲೂ ಪರಿಣಿತ ಸಿಬ್ಬಂದಿಯನ್ನು ಹೊಂದಿರುವ ಸ್ವಾಗತ ಕೇಂದ್ರ (ರಿಸೆಪ್ಶನ್ ಡೆಸ್ಕ್) ಪ್ರಾರಂಭಿಸುವಂತೆ ಠಾಣೆಗಳಿಗೆ ರಾಜ್ಯ ಸರಕಾರ ಸೂಚಿಸಿದೆ.

ಪ್ರತಿ ಪೊಲೀಸ್ ಠಾಣೆಗಳಲ್ಲೂ ಸ್ವಾಗತ ಡೆಸ್ಕ್ ಹಾಗೂ “ನಾನು ನಿಮಗೆ ಸಹಾಯ ಮಾಡಲೇ ?” ಎನ್ನುವ ಬೋರ್ಡ್ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಕಂಡು ಬರಲಿದೆ. ಠಾಣೆಗೆ ದೂರು ಹೊತ್ತು ಬರುವ ದೂರುದಾರರನ್ನು ಅತ್ಯಂತ ಅಕ್ಕರೆಯಿಂದ ಇಲ್ಲಿನ ಸಿಬ್ಬಂದಿ ಮಾತನಾಡಿಸಲಿದ್ದಾರೆ. ನಾಲ್ಕು ಮಂದಿ ಸಿಬ್ಬಂದಿಯನ್ನು ಈ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ಇದು ಜನಸ್ನೇಹಿ ಪೊಲೀಸಿಂಗ್ ಮಾಡುವ ಒಂದು ವ್ಯವಸ್ಥೆಯ ಭಾಗವಾಗಿದೆ ಎಂದು ಡಿಜಿ ಅಂಡ್ ಐಜಿಪಿ ನೀಲಮಣಿ ಎನ್ ರಾಜು ಹೇಳಿದ್ದಾರೆ. ಈ ವ್ಯವಸ್ಥೆಯನ್ನು ಸಾಕಾರಗೊಳಿಸಲು ಒಂದು ಲಕ್ಷ ರೂ ನೀಡಲಾಗುತ್ತದೆ ಎಂದಿದ್ದಾರೆ.

ಇದರಲ್ಲಿ ಅಧಿಕಾರಿಗಳು ಮತ್ತು ಠಾಣೆಗೆ ಬರುವವರಿಗೆ ಆಸನ, ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಇದಲ್ಲದೆ ಪ್ರತ್ಯೇಕ ಪುಸ್ತಕವನ್ನು ಇಲ್ಲಿಡಲಾಗುತ್ತಿದ್ದು, ಪ್ರತಿಯೊಬ್ಬರ ಸಂಪೂರ್ಣ ವಿವರಗಳನ್ನು ಇಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಅಲ್ಲದೆ ಅದರಲ್ಲಿ ಅವರ ಸಹಿಯನ್ನೂ ಹಾಕಿಕೊಳ್ಳಲಾಗುತ್ತದೆ. ಶೀಘ್ರವೇ ಕಂಪ್ಯೂಟರನ್ನೂ ಇಲ್ಲಿ ಅಳವಡಿಸಲಾಗುತ್ತದೆ ಎಂದವರು ಹೇಳಿದ್ದಾರೆ.