ತಿವಾರಿ ಸಾವು ತನಿಖೆ ಎದುರಿಸಲು ಸಿದ್ಧ : ಖಾದರ್

ವಿಶೇಷ ವರದಿ

ಮಂಗಳೂರು : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯವರ ಸಂಶಯಾಸ್ಪದ ಸಾವಿನ ಸಂಬಂಧ ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧವಿದೆಯೆಂದು ಹೇಳಿರುವ ಸಚಿವ ಯು ಟಿ ಖಾದರ್, ಇದೀಗ ಆರೋಪಿಸಲಾಗಿರುವಂತೆ ತಿವಾರಿ ಮೇಲೆ ಯಾರೂ ಯಾವುದೇ ಒತ್ತಡ ಹೇರಿರಲಿಲ್ಲ ಎಂದು ಹೇಳಿದ್ದಾರೆ.

“ಅನುರಾಗ್ ತಿವಾರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿ ಜನವರಿ 4ರಂದು ಅಧಿಕಾರಿ ಸ್ವೀಕರಿಸಿ ಇಲಾಖೆಯ ಸೇವೆಯಲ್ಲಿ 132 ದಿನಗಳ ತನಕ ಇದ್ದರೂ ಅವರು ಕೇವಲ 37 ದಿನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರನ್ನು ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣಾ ವೀಕ್ಷಕರಾಗಿ ಕೆಲ ದಿನಗಳ ಕಾಲ ನಿಯೋಜಿಸಲಾಗಿತ್ತು. ಐಎಎಸ್ ತರಬೇತಿಗಾಗಿಯೂ ಅವರು ರಜೆ ಹಾಕಿದ್ದರು. ಅವರ ಮೇಲೆ ಇಲಾಖೆ ಒತ್ತಡ ಹಾಕುವ ಅವಕಾಶವೇ ಇರಲಿಲ್ಲ” ಎಂದು ಸುದ್ದಿಗಾರರೊಡನೆ ಮಾತನಾಡಿದ ಖಾದರ್ ಹೇಳಿದರು.

ತಿವಾರಿಗೆ 5 ತಿಂಗಳ ವೇತನ ಬಾಕಿಯಿತ್ತು

ಉತ್ತರ ಪ್ರದೇಶದ ಲಕ್ನೋದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಕರ್ನಾಟಕ ಕ್ಯಾಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯವರ  ವೇತನವನ್ನು ಕರ್ನಾಟಕ ಸರಕಾರ ಕಳೆದ ಐದು ತಿಂಗಳುಗಳಿಂದ ತಡೆಹಿಡಿದಿತ್ತೆಂದು ಅವರ ಕುಟುಂಬ ಸದಸ್ಯರು ಇದೀಗ ಆರೋಪಿಸುತ್ತಿದ್ದಾರೆ. “ಅನುರಾಗ್ ಬ್ಯಾಂಕ್  ಅಕೌಂಟ್ ಸ್ಟೇಟ್ಮೆಂಟ್ ಪರಿಶೀಲಿಸಬಹುದು. ನಾವು ಮೇ 14ರಂದು ಕೊನೆಯ ಬಾರಿ ಭೇಟಿಯಾದಾಗ ಆತ ನನ್ನಿಂದ ಹಣ ಪಡೆದಿದ್ದ. ಆತ ಸಾವಿಗೀಡಾಗುವ ಮುನ್ನ ಆತನ ವೇತನ ಖಾತೆಯಲ್ಲಿ ರೂ 11,000 ಇತ್ತು” ಎಂದು ಅನುರಾಗ್ ಹಿರಿಯ ಸಹೋದರ ಮಾಯಾಂಕ್ ಹೇಳಿದ್ದಾರೆ.

ಕರ್ನಾಟಕ ಸರಕಾರ ಅನುರಾಗ್ ವಿರುದ್ಧ ಶಿಸ್ತು ಕ್ರಮದ ಅಂಗವಾಗಿ ಅವರ ವೇತನ ತಡೆಹಿಡಿದಿತ್ತೇ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ.

ತಮ್ಮ ಸಹೋದರ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ದೊಡ್ಡ ಹಗರಣವನ್ನು  ಬಹಿರಂಗಪಡಿಸುವವರಿದ್ದರು ಎಂಬುದಾಗಿ ಮಾಯಾಂಕ್ ಈಗಾಗಲೇ ಹೇಳಿದ್ದನ್ನು ಸ್ಮರಿಸಬಹುದು. “ ಅವರ ಸಾವಿನ ಹಿಂದಿನ ಸತ್ಯ ಹೊರಬರಬೇಕು” ಎಂದು ಅವರು ಆಗ್ರಹಿಸಿದ್ದಾರೆ.