ಆರ್ ಸಿ ಬಿ ತಂಡಕ್ಕೆ ರೋಚಕ ಗೆಲುವು, ಪಂಜಾಬಿಗೆ ಜಯ ತಂದಿತ್ತ ಮ್ಯಾಕ್ಸವೆಲ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಶನಿವಾರ ನಡೆದ ಎರಡು ಪಂದ್ಯಗಳು ಕ್ರಿಕೆಟ್ ತಜ್ಞರ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.  ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಪಡೆದರೆ, ಇಂದೋರಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಪುಣೆ ಸೂಪರ್ ಜೈಂಟ್ ತಂಡವನ್ನು ಆರು ವಿಕೆಟ್ ಅಂತರದಲ್ಲಿ ಮಣಿಸಿತು.

ಈ ಎರಡು ಪಂದ್ಯಗಳಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿದ್ದ ತಂಡಗಳು ಸೋತಿದೆ. ಸ್ಟಾರ್ ಆಟಗಾರರ  ಫಿಟ್ನೆನ್ಸ್ ಬಗೆಗಿನ ಗೊಂದಲದ ನಡುವೆಯೂ ಆರ್ ಸಿ ಬಿ ಸೋಲಿನ ಭೀತಿಯಲ್ಲಿತ್ತು.  ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿ ಬಿ  20 ಓವರುಗಳಲ್ಲಿ ಡೆಲ್ಲಿ ತಂಡದ ವಿರುದ್ಧ  157 ರನ್ನುಗಳ   ಸಾಧಾರಣ ಮೊತ್ತ ಸೇರಿಸಿತು.

`ಸಿಕ್ಸರ್ ವೀರ’ ಕ್ರಿಸ್ ಗೇಲ್ ಈ ಬಾರಿಯೂ ವಿಫಲರಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೇದಾರ್ ಜಾಧವ್ 37 ಎಸೆತಗಳಲ್ಲಿ 5 ಸಿಕ್ಸ್, 5 ಬೌಂಡರಿಗಳ ನೆರವಿನಿಂದ ಬಿರುಸಿನ 69 ರನ್ ಬಾರಿಸಿದರು. ಡೆಲ್ಲಿ ಪರ ವೇಗದ ಬೌಲರುಗಳು ಆರ್ ಸಿ ಬಿ ಆಟಗಾರರನ್ನು ನಿಯಂತ್ರಿಸುವಲ್ಲಿ ಸಫಲರಾದರು. ಕ್ರಿಸ್ ಮೊರಿಸ್ 21ರನ್ನಿಗೆ 3 ವಿಕೆಟ್ ಪಡೆದರೆ, ನಾಯಕ ಜಹೀರ್ ಖಾನ್ 31ರನ್ನಿಗೆ 2 ವಿಕೆಟ್ ಪಡೆದುಕೊಂಡರು.

ಈ ಮೊತ್ತವನ್ನು ಬೆಂಬತ್ತಿದ ಡೆಲ್ಲಿ ತಂಡವು ಗೆಲುವಿನ ಎಲ್ಲಾ ಸಾಧ್ಯತೆಯನ್ನು ಹೊಂದಿತ್ತು. ಯುವ ಪ್ರತಿಭೆ ರಿಷಬ್ ಪಂತ್ ಕೊನೆಯ ತನಕವೂ ಜಯಕ್ಕಾಗಿ ಹೋರಾಟ ನಡೆಸಿದರು. ಆವರು 57 ರನ್  ಕೊಡುಗೆಯನ್ನು ನೀಡಿ ಆಡುತ್ತಿದ್ದರು. ಆದರೆ,  ಪವನ್ ನೇಗಿಯವರ ಕೊನೆಯ ಹಂತದ ಚಮತ್ಕಾರಿ ಬೌಲಿಂಗಿಗೆ  ರಿಷಬ್ ಪಂತ್ ಬಲಿಯಾದ ಕಾರಣ  ಬೆಂಗಳೂರು ತಂಡ 15 ರನ್  ರೋಚಕ ಜಯವನ್ನು ಪಡೆಯಿತು.  ಆರ್ ಸಿ ಬಿ ಪರ ಅದ್ಭುತ ಬ್ಯಾಟಿಂಗ್ ನಡೆಸಿದ ಕೇದಾರ್ ಜಾಧವ್ ಪಂದ್ಯಶ್ರೇಷ್ಠರಾಗಿ ಪುರಸ್ಕೃತಗೊಂಡರು.

ಪುಣೆಗೆ ಸೋಲು

ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿಕೊಂಡಿದ್ದ ಪುಣೆ ತಂಡವು ಪಂಜಾಬ್ ತಂಡಕ್ಕೆ ಶರಣಾದ ರೀತಿ ಆಶ್ಚರ್ಯ ಮೂಡಿಸಿತು. ಪಂಜಾಬ್ ವೇಗದ ಬೌಲಿಂಗಿಗೆ ತತ್ತರಿಸಿದ ಪುಣೆ ಆಟಗಾರರು 20 ಓವರುಗಳಲ್ಲಿ 6 ವಿಕೆಟಿಗೆ ಸೇರಿಸಿದ್ದು 163 ರನ್. ಬೆನ್ ಸ್ಟ್ರೋಕ್ಸ್  ಹಾಗೂ ಮನೋಜ್ ತಿವಾರಿ ಪುಣೆ ತಂಡವನ್ನು ಬ್ಯಾಟಿಂಗ್ ಮೂಲಕ  ಆಧರಿಸಿದರು. ಬೆನ್ ಸ್ಟ್ರೋಕ್ಸ್ 36 ಎಸೆತಗಳಲ್ಲಿ 50 ರನ್ ಗಳಿಸಿದರೆ,  ಮನೋಜ್ ತಿವಾರಿ 23 ಎಸೆತಗಳಲ್ಲಿ ಸ್ಫೋಟಕ 40 ರನ್ ಹೊಡೆದರು.  ಪರಿಣಾಮಕಾರಿ ಬೌಲಿಂಗ್ ನಡೆಸಿದ ಸಂದೀಪ್ ಶರ್ಮ 33 ರನ್ನಿಗೆ 2 ವಿಕೆಟ್ ಪಡೆದರು.

ಪುಣೆ ಗಳಿಸಿದ 163 ರನ್ನುಗಳನ್ನು ಬೆನ್ನತ್ತಿದ ಪಂಜಾಬ್ ತಂಡ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಜಯ ಗಳಿಸಿತು. ನಾಯಕ ಗ್ಲೆನ್ ಮ್ಯಾಕ್ಸವೆಲ್ ಬರಸಿಡಿಲಿನ ಆಟವಾಡಿ 44 ರನ್ ಬಾರಿಸಿದರು. ಇದರಲ್ಲಿ 4 ಸಿಕ್ಸರ್, 2 ಬೌಂಡರಿ ಇತ್ತು. ಇವರಿಗೆ ಜೊತೆಯಾಗಿ ನಿಂತವರು ಡೇವಿಡ್ ಮಿಲ್ಲರ್. 27 ಎಸೆತಗಳಲ್ಲಿ ಮಿಲ್ಲರ್ 30 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಸಾಗಿಸಿದರು. ನಾಯಕ ಮ್ಯಾಕ್ಸವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.