`ಜೀವಕ್ಕೆ ಅಪಾಯ’ವೆಂದು ನೋಟು ರದ್ದತಿ ಪ್ರಶ್ನೆಗೆ ಉತ್ತರಿಸಲು ಆರ್ಬಿಐ ನಕಾರ

ನವದೆಹಲಿ : ನೋಟು ಅಮಾನ್ಯೀಕರಣದ ವಿಚಾರದಲ್ಲಿ ಸ್ಪಷ್ಟ ವಿವರಗಳನ್ನು ನೀಡಲು ನಿರಾಕರಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇದು ದೇಶದ ಏಕತೆಗೆ ಹಾಗೂ ಭದ್ರತೆಗೆ ಅಪಾಯ ಉಂಟು ಮಾಡಬಹುದಲ್ಲದೆ ಕೆಲವರ ಜೀವಕ್ಕೂ ಅಪಾಯವೊಡ್ಡಬಹುದು ಎಂದು ಹೇಳಿ ಸರಕಾರದ ಈ ಕ್ರಮದ ಸುತ್ತದ ರಹಸ್ಯವನ್ನು ಮತ್ತಷ್ಟು ಗೋಜಲುಗೊಳಿಸಿದೆ.
ನವೆಂಬರ್ ತಿಂಗಳಲ್ಲಿ ಇಂಧನ ಸಚಿವ ಪಿಯುಶ್ ಗೋಯಲ್ ಸಂಸತ್ತಿಗೆ ನೀಡಿದ ಮಾಹಿತಿಯಲ್ಲಿ ಈ ಕ್ರಮವನ್ನು ರಿಸರ್ವ್ ಬ್ಯಾಂಕ್ ಶಿಫಾರಸು ಮಾಡಿದ ನಂತರ ಸಚಿವ ಸಂಪುಟ ಅದಕ್ಕೆ ಒಪ್ಪಿಗೆ ಸೂಚಿಸಿ ಪ್ರಧಾನಿ ಈ ಬಗ್ಗೆ ಘೋಷಣೆ ಮಾಡಿದ್ದಾರೆಂದು ಹೇಳಿದ್ದರು. ಆದರೆ ಆರ್ಬಿಐ ಈ ಬಗ್ಗೆ ಹಿಂದೆ ಚರ್ಚಿಸಿರಲಿಲ್ಲ ಎಂದು ಬ್ಲೂಂಬರ್ಗ್ ನ್ಯೂಸ್ ಕೇಳಿದ ಹಲವಾರು ಆರ್ಟಿಐ ಪ್ರಶ್ನೆಗಳಿಗೆ ದೊರೆತ ಉತ್ತರದಲ್ಲಿ ತಿಳಿಸಲಾಗಿದೆ.
ವಾಸ್ತವದಲ್ಲಿ ಸಂಬಂಧಿತ ಅಧಿಕಾರಿಗಳು ಇಂತಹ ಒಂದು ನಿರ್ಧಾರಕ್ಕೆ ಸಿದ್ಧರಾಗಿರಲಿಲ್ಲವೆಂದು ಇದರಿಂದ ಸ್ಪಷ್ಟವಾಗಿದೆಯಲ್ಲದೆ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆ, ಪ್ರಧಾನಿ ಮೋದಿಯ ನಿರ್ಧಾರ ಕೈಗೊಳ್ಳುವ ಶೈಲಿ ಹಾಗೂ ಅವರು ದೇಶದ ಅತ್ಯುನ್ನತ ಬ್ಯಾಂಕಿನೊಂದಿಗೆ ಸಂವಹನ ನಡೆಸುವ ರೀತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ.