ಆರ್ ಬಿ ಐ ಈಗ ಹೊರಡಿಸಿರುವ ಆದೇಶ ಪ್ರಧಾನಿ ಮೋದಿಯವರ ವಿರುದ್ಧವಾಗಿದೆ !

ರೂಪಾಯಿ ಐನೂರು ಮತ್ತು ಒಂದು ಸಾವಿರ ಮುಖಬೆಲೆ ನೋಟು ರದ್ದುಗೊಳಿಸಿ ಹೊರಡಿಸಿದ ಆದೇಶದ ಪ್ರಕಾರ ಈ ತಿಂಗಳ 30ರವರೆಗೂ ಈ ನೋಟುನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಅವಕಾಶವಿತ್ತು. ಆದರೆ ಆರ್ ಬಿ ಐ ಇತ್ತೀಚೆಗೆ ಹೊರಡಿಸಿದ ಆದೇಶದಂತೆ ರೂಪಾಯಿ 5000ಕ್ಕಿಂತ ಹೆಚ್ಚು ಮೌಲ್ಯದ ಹಳೆಯ ನೋಟÀನ್ನು ಖಾತೆಗೆ ಜಮಾ ಮಾಡುವುದಾದರೆ ಇಲ್ಲಿಯವರೆಗೂ ಹಾಗೇಕೆ ಮಾಡಿರಲಿಲ್ಲ ಎನ್ನುವುದಕ್ಕೆ ಬ್ಯಾಂಕಿನ ಇಬ್ಬರು ಅಧಿಕಾರಿಗಳ ಸಮ್ಮುಖದಲ್ಲಿ ತೃಪ್ತಿಕರವಾದ ವಿವರಣೆ ನೀಡಬೇಕಾಗುತ್ತದೆ. ಅಲ್ಲದೆ ರೂಪಾಯಿ 5000ಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದು ಖಾತೆಗೆ ಒಮ್ಮೆ ಮಾತ್ರ ಜಮಾ ಮಾಡಬಹುದು.

ಇಲ್ಲಿ ಒಂದೆರಡು ಪ್ರಶ್ನೆಗಳು ಪ್ರಸ್ತುತವಾಗುತ್ತದೆ. ನವೆಂಬರ್ 8ರಂದು ಪ್ರಧಾನಿ ದೇಶದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರದ್ದಾಗಲಿರುವ ರೂಪಾಯಿ ಐನೂರು ಮತ್ತು ಒಂದು ಸಾವಿರ ನೋಟುನ್ನು ಬ್ಯಾಂಕುಗಳಿಗೆ ಕೊಡಬಹುದು ಎಂದು ಹೇಳಿದ್ದರು. ಆರ್ ಬಿ ಐ ಈಗ ಹೊರಡಿಸಿರುವ ಆದೇಶವು ಪ್ರಧಾನಿಯ ಆಶ್ವಾಸನೆಗೆ ವಿರುದ್ಧವಾಗಿಲ್ಲವೇ ? ಬ್ಯಾಂಕಿನ ಅಧಿಕಾರಿಗಳಿಗೆ ಖಾತೆದಾರರಿಂದ ಹಾಗೆ ವಿವರಣೆ ಪಡೆಯಲು ಯಾವ ಕಾಯ್ದೆಯು ಅಧಿಕಾರ ಕೊಡುತ್ತದೆ ? ನೋಟುಗಳ ರದ್ಧತಿ ನಂತರದ ವಿದ್ಯಮಾನಗಳನ್ನು ಗಮನಿಸಿದರೆ ಸರಕಾರ ಮತ್ತು ಆರ್ ಬಿ ಐ ಗೊಂದಲಕ್ಕೆ ಒಳಗಾಗಿವೆ ಎನ್ನುವುದು ಸ್ಪಷ್ಟ.

  • ಕೆ ನಿರಂಜನ್ ಶೆಟ್ಟಿ, ಕಿನ್ನಿಮುಲ್ಕಿ-ಉಡುಪಿ