ರವೀನಾ ಅಪ್ಸೆಟ್

ರವೀನಾ ಟಂಡನ್ ಈಗ `ಮಾತೃ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾಳೆ. ಆದರೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸಿನಿಮಾಗೆ ಸರ್ಟಿಫಿಕೇಟ್ ಕೊಡುವುದನ್ನು ತಡೆಹಿಡಿದಿದೆ. ಚಿತ್ರದಲ್ಲಿ ಹಿಂಸಾತ್ಮಕ ಅತ್ಯಾಚಾರದ ದೃಶ್ಯಗಳಿರುವುದರಿಂದ ಚಿತ್ರ ಪ್ರದರ್ಶನಕ್ಕೆ ಇನ್ನೂ ಓಕೆ ಸರ್ಟಿಫಿಕೇಟ್ ನೀಡಿಲ್ಲ. ಚಿತ್ರಕ್ಕೆ `ಎ’ ಸರ್ಟಿಫಿಕೇಟ್ ನೀಡಲೂ ಕೆಲವು ಗ್ರಾಫಿಕ್ ಸೀನುಗಳನ್ನು ತೆಗೆದುಹಾಕುವುದು ಅನಿವಾರ್ಯ ಎನ್ನಲಾಗಿದೆ. ಇದರಿಂದಾಗಿ ರವೀನಾಗೆ ಭಾರೀ ಅಸಮಧಾನವಾಗಿದೆ.

ಈ ಬಗ್ಗೆ ಮಾತಾಡುತ್ತಾ ರವೀನಾ “ಸೆನ್ಸಾರ್ ಬೋರ್ಡಿನವರಿಗೆ ಕೆಲವು ನಿಬಂಧನೆಗಳಿರಬಹುದು. ಆದರೂ ಇಂತಹ ಚಿತ್ರಗಳನ್ನು ಸಿಹಿಲೇಪಿತವಾಗಿ ತೋರಿಸಲು ಬರುವುದಿಲ್ಲ. ಅತ್ಯಾಚಾರದಂತಹ ಪಿಡುಗನ್ನು, ಅದರ ಕ್ರೂರತೆಯನ್ನು ನೈಜವಾಗಿ ತೋರಿಸದಿದ್ದರೆ ಸಮಾಜದಲ್ಲಿ ಆ ಪಿಡುಗಿನ ಬಗ್ಗೆ ಸೀರಿಯಸ್ನೆಸ್ ಮೂಡುವುದಿಲ್ಲ. ಅದು ಬರೀ ಹೇಳಿಕೆಗೆ ಸೀಮಿತವಾಗುತ್ತದೆಯಷ್ಟೇ” ಎನ್ನುತ್ತಾಳೆ. ಈ ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗಲು ಸಜ್ಜಾಗಿರುವುದರಿಂದ ಸೆನ್ಸಾರ್ ಅಷ್ಟರಲ್ಲಿ ಸರ್ಟಿಫಿಕೇಟ್ ನೀಡಲಿದೆಯಾ ನೋಡಬೇಕಿದೆ.