ಜನವರಿಯಿಂದ ಸ್ಥಳದಲ್ಲೇ ರೇಶನ್ ಕಾರ್ಡ್ : ಖಾದರ್

ನಮ್ಮ ಪ್ರತಿನಿಧಿ ವರದಿ

ಬೆಂಗಳೂರು : ಮುಂಬರುವ ಅಸೆಂಬ್ಲಿ ಚುನಾವಣೆ ಗಮನದಲ್ಲಿಟ್ಟುಕೊಂಡು ಸ್ಥಳದಲ್ಲೇ ರೇಶನ್ ಕಾರ್ಡು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತುರ್ತು ಸಂದರ್ಭದಲ್ಲಿ ಯಾರಿಗೆಲ್ಲ ರೇಶನ್ ಕಾರ್ಡು ಬೇಕಿದೆಯೋ ಅಂತಹವರಿಗೆ ಇದರಿಂದ ಲಾಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಖಾದರ್ ತಿಳಿಸಿದರು.

“ವೈದ್ಯಕೀಯ ಮತ್ತು `ಬಿದಾಯಿ’ (ವಿವಾಹ) ಸಂದರ್ಭದಲ್ಲಿ ತುರ್ತಾಗಿ ರೇಶನ್ ಅಗತ್ಯವಿದ್ದವರಿಗೆ ಸ್ಥಳದಲ್ಲೇ ರೇಶನ್ ಕಾರ್ಡ್ ಲಭ್ಯವಾಗಲಿದೆ. ಕಾರ್ಡ್ ಬಯಸುವವರು ಆದಾಯ ಮತ್ತು ಜಾತಿ ಪ್ರಮಾಣಪತ್ರ ಮಂಡಿಸಬೇಕು” ಎಂದರು.

ವರ್ಷಾರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ರೇಶನ್ ಕಾರ್ಡು ನೀತಿಯಲ್ಲಿ ಕೆಲವು ಸಡಿಲಿಕೆ ನೀಡಿತ್ತು. ಸ್ಥಳದಲ್ಲೇ ರೇಶನ್ ಕಾರ್ಡ್ ವ್ಯವಸ್ಥೆ ಮುಂದಿನ ವರ್ಷ ಜನವರಿಯಿಂದ ಆರಂಭಗೊಳ್ಳಲಿದೆ. ಆ ವೇಳೆಗೆ ರಾಜ್ಯದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ರೇಶನ್ ಕಾರ್ಡ್ ಲಭ್ಯವಾಗಲಿದೆ ಎಂದು ಖಾದರ್ ಆಶಾವಾದ ವ್ಯಕ್ತಪಡಿಸಿದ್ದಾರೆ.

“ನಾವು ಈಗ 16 ಲಕ್ಷ ಅರ್ಜಿ ಸ್ವೀಕರಿಸಿದ್ದು, ಇದರಲ್ಲಿ 10 ಲಕ್ಷ ರೇಶನ್ ಕಾರ್ಡ್ ಬಿಡುಗಡೆಗೊಳಿಸಿದ್ದೇವೆ. ಡಿಸೆಂಬರ್ 15ರಿಂದ ಎಲ್ಲ ಅರ್ಜಿಗಳ ವಿಲೇ ಕಾರ್ಯ ನಡೆಯಲಿದೆ” ಎಂದರು.

“ಆದಾಯ ಮತ್ತು ಜಾತಿ ಪ್ರಮಾಣಪತ್ರ ಬಿಡುಗಡೆಗೊಳಿಸುವಾಗ ಕಂದಾಯ ಇಲಾಖೆ ವಿಳಂಬ ಮಾಡಿರುವುದರಿಂದ ಹೊಸ ರೇಶನ್ ಕಾರ್ಡುಗಳ ಕಾರ್ಯ ತಡವಾಗಿದೆ. ಈಗ ಕಂದಾಯ ಇಲಾಖೆಯಲ್ಲಿ ಹೆಚ್ಚುವರಿ ಕೌಂಟರ್ ತೆರೆಯಲಾಗಿದೆ” ಎಂದು ಖಾದರ್ ತಿಳಿಸಿದರು.

“ಮುಂದಿನ ಆರು ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯಡಿ 10 ಲಕ್ಷ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು. ಈ ಯೋಜನೆಯಡಿ ಸಿಲಿಂಡರ್, ಸ್ಟವ್, ಲೈಟರ್ ಮತ್ತು ಎರಡು ರಿಫಿಲ್ ನೀಡಲಾಗುವುದು. ಇದಕ್ಕೆ ಒಂದು ಕುಟುಂಬದ ಮೇಲೆ ಸರ್ಕಾರ 4,040 ರೂ ವ್ಯಯಿಸಲಿದೆ”’ ಎಂದರು.