ನ್ಯಾಯಬೆಲೆ ಅಂಗಡಿಯ ಅಕ್ಕಿ, ಗೋಧಿಯಲ್ಲಿ ಹೆಗ್ಗಣಗಳ ಹಿಕ್ಕೆ

ಗ್ರಾಹಕರಿಗೆ ನೀಡಿದ ಕಳಪೆ ಆಹಾರ

ಸಿಬ್ಬಂದಿ ತರಾಟೆಗೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ-ಗೋಧಿಯೊಂದಿಗೆ ಇಲಿ, ಹೆಗ್ಗಣಗಳ ಮತ್ತು ಪಕ್ಷಿಗಳ ಹಿಕ್ಕೆಗಳು, ಕಸ ಕಡ್ಡಿಗಳನ್ನು ಉಚಿತವಾಗಿ ನೀಡುತ್ತಿರುವ ಬಗ್ಗೆ ಆಕ್ರೋಶಗೊಂಡ ಗ್ರಾಹಕರು ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ವಿಟ್ಲದ ಪುರಭವನ ವಠಾರದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದೆರಡು ದಿನಗಳಿಂದ ಬಡ ಕುಟುಂಬಗಳಿಗೆ ನೀಡುತ್ತಿರುವ ಪಡಿತರ ಗೋಧಿ ಮತ್ತು ಅಕ್ಕಿಯನ್ನು ತಿನ್ನಲು ಮನುಷ್ಯರು ಬಿಡಿ ಪ್ರಾಣಿಗಳು ಕೂಡಾ ಅಸಹ್ಯಪಡುವಂತಿದ್ದು, ಮೂರ್ನಾಲ್ಕು ಕಿಲೋ ಮೀಟರ್ ದೂರದಿಂದ ಪಡಿತರ ಗ್ರಾಹಕರು ತಮ್ಮ ಪಾಲಿನ ಅಕ್ಕಿ ಮತ್ತು ಗೋಧಿಗಾಗಿ ನ್ಯಾಯಬೆಲೆ ಅಂಗಡಿಗೆ ಬಂದವರು ಅದನ್ನು ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

“ಇಲ್ಲಿನ ಸಿಬ್ಬಂದಿ ತೂಕ ಮಾಡಿ ನೀಡುತ್ತಿರುವ ಅಕ್ಕಿ-ಗೋಧಿಯಲ್ಲಿ ಇಲಿ, ಹೆಗ್ಗಣಗಳ ಹಾಗೂ ಪಾರಿವಾಳಗಳ ಹಿಕ್ಕೆಗಳು, ಕಸ ಕಡ್ಡಿಗಳ ಜೊತೆ ಕಡಲೆ ಗಾತ್ರದ ಕಲ್ಲುಗಳು ಬೇಕಾದಷ್ಟು ಉಚಿತವಾಗಿ ಸೇರಿಕೊಂಡಿವೆ. ಅದಲ್ಲದೇ ಉಪ್ಪಿನ ಪ್ಯಾಕೇಟುಗಳು ಕೂಡಾ ಬಾಯಿ ತೆರೆದುಕೊಂಡಿದ್ದು, ಕಸಕಡ್ಡಿಗಳ ರಾಶಿಯಲ್ಲೇ ಬಿದ್ದುಕೊಂಡಿವೆ. ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಕೊಠಡಿಯ ಅವ್ಯವಸ್ಥೆ ದನದ ದೊಡ್ಡಿಯನ್ನೂ ಮೀರಿಸುವಂತಿದೆ” ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸಿಬ್ಬಂದಿಯಲ್ಲಿ ಪ್ರಶ್ನಿಸಿದಾಗ “ಈ ಬಾರಿ ಬಂದ 40 ಗೋಣಿ ಗೋಧಿ ಮತ್ತು ಅಕ್ಕಿ ಇದೇ ರೀತಿಯಿದ್ದು. ನಾವೇನು ಮಾಡಲು ಸಾಧ್ಯ” ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಪಡಿತರ ಪಡೆಯಲು ಬರುತ್ತಿರುವ ಬಡ ಗ್ರಾಹಕರು ಕೂಡಾ ನಮ್ಮಂತೆಯೇ ಮನುಷ್ಯರೆಂಬುದನ್ನು ನ್ಯಾಯಬೆಲೆ ಅಂಗಡಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಿಳಿದುಕೊಳ್ಳಬೇಕಿದೆ. ಇನ್ನಾದರೂ ಇಂತಹ ಕಳಪೆ ಸಾಮಗ್ರಿಗಳನ್ನು ಬಡ ಕುಟುಂಬಗಳಿಗೆ ನೀಡುವ ಮುನ್ನ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಿ ಎಂಬುದು ಗ್ರಾಹಕರ ಒತ್ತಾಯವಾಗಿದೆ.