ಭೂಗತ ಪಾತಕಿ ರಶೀದ್ ಮಲಬಾರಿ ಸಹಚರ ಮಹಮ್ಮದ್ ಶಮೀರ್ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕುಖ್ಯಾತ ಭೂಗತ ಪಾತಕಿ ರಶೀದ್ ಮಲಬಾರಿಯ ಸಹಚರ ಜೋಕಟ್ಟೆಯ ಮಹಮ್ಮದ್ ಶಮೀರ್(27)ನನ್ನು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ರಫೀಕ್ ಕೆ ಎಂ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

2013ರಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೆದರಿಕೆ ಕರೆ, ಹಫ್ತಾ ವಸೂಲಿ ಮತ್ತು ಕ್ರಿಮಿನಲ್ ಕೃತ್ಯಗಳ ಹಿಂದೆ ಶಮೀರ್ ಕೈವಾಡವಿದ್ದು, ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಆದರೆ ಕೋರ್ಟ್ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡು ಓಡಾಡಿಕೊಂಡಿದ್ದ ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಕೆಲವ ಸಮಯಗಳ ಹಿಂದೆ ಹಲ್ಲೆ ಪ್ರಕರಣ ಕೂಡಾ ದಾಖಲಾಗಿತ್ತು. ಇದೀಗ ಆರೋಪಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಕಲ್ಲಂತಡ್ಕ ಎಂಬಲ್ಲಿ ವಾಸ ಮಾಡಿಕೊಂಡಿದ್ದಾನೆ ಎನ್ನುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಇದೀಗ ಬಂಧಿಸಿದ್ದಾರೆ.