ಸ್ಥಾನಪಲ್ಲಟಗೊಂಡಿದ್ದ ವೃಷಣ ಯಶಸ್ವಿ ಆಪರೇಶನ್ ಮೂಲಕ ಮೂಲಸ್ಥಾನಕ್ಕೆ

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲೆಯಲ್ಲೇ ಅಪರೂಪದ ಶಸ್ತ್ರಚಿಕಿತ್ಸೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಸ್ಥಾನಪಲ್ಲಟಗೊಂಡಿದ್ದ ವೃಷಣವನ್ನು ಯಶಸ್ವಿ ಆಪರೇಶನ್ ಮೂಲಕ ಮೂಲಸ್ಥಾನಕ್ಕೆ ಸೇರಿಸುವ ಅತಿ ಮಹತ್ವದ, ಅತಿ ಅಪರೂಪದ ಆಪರೇಶನ್  ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿ ಮಂಗಳವಾರ ನಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ.

ತಾಲೂಕಿನ ಗ್ರಾಮೀಣ ಭಾಗದ ವ್ಯಕ್ತಿಯೊಬ್ಬರು ತೊಡೆಯಲ್ಲಿ ನೋವು ಬರುತ್ತಿದೆಯೆಂಬ ಕಾರಣಕ್ಕೆ ಶಿರಸಿ ಸರ್ಕಾರಿ ಆಸ್ಪತ್ರೆಯ ಅತಿಥಿ ವೈದ್ಯರಾದ ಮೂತ್ರಾಂಗ ತಜ್ಞ ಡಾ ಗಜಾನನ ಭಟ್ಟರನ್ನು ಸಂಪರ್ಕಿದ್ದರು. ಅವರು ತೊಡೆಯ ಜಾಗ ಬಾತಿರುವದು ಕಂಡು ಗುಳ್ಳೆ ಆಗಿರುವ ಸಂದೇಹದಡಿ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ ರೇವಣಕರ ಅವರ ಜತೆಗೂ ಚರ್ಚಿಸಿದ್ದರು. ಆಗ ವ್ಯಕ್ತಿಯು, “ಸದ್ಯದ ಹುಟ್ಟಿದ ಗುಳ್ಳೆಯಲ್ಲ. ಹುಟ್ಟಿದಾಗಿನಿಂದಲೂ ಇಂತಹ ಗಡ್ಡೆ ಇದೆ. ಆದರೆ ನೋವು ಇರಲಿಲ್ಲ. ಈಗ ಬಂದಿದೆ” ಎಂದರು. ತಕ್ಷಣ ಡಾ ಗಜಾನನ ಭಟ್ಟರು ವ್ಯಕ್ತಿಯ ವೃಷಣಾಂಗ ಪರೀಕ್ಷೆ ಮಾಡಿದಾಗ ಒಂದೇ ವೃಷಣ ಇದ್ದು, ಇನ್ನೊಂದು ಕಂಡುಬರಲಿಲ್ಲ. ಗಡ್ಡೆಯ ಜಾಗ ಪರೀಕ್ಷೆ ನಡೆಸಿದಾಗ ಅಲ್ಲಿ ಇನ್ನೊಂದು ವೃಷಣ ಬೆಳೆದಿರುವದು ಸಂದೇಹವೂ ವೈದ್ಯರಿಗೆ ಬಂತು. ಇಂತಹ ಸಮಸ್ಯೆ ಲಕ್ಷಕ್ಕೆ ಒಬ್ಬರಿಗೆ ಬರುತ್ತಿದ್ದು, ಬೆಂಗಳೂರು, ಮಂಬಯಿಯಲ್ಲಿ ಅಪರೂಪಕ್ಕೆ ಇಂತಹ ಆಪರೇಶನ ಮಾಡಲಾಗುತ್ತದೆ ಎಂಬುದು ವೈದ್ಯರ ಅನಿಸಿಕೆ.

ಡಾ ಗಜಾನನ ಭಟ್ಟರು 1 ತಾಸು ಯಶಸ್ವಿ ಆಪರೇಶನ್ನಿನಲ್ಲಿ ತೊಡೆಯಲ್ಲಿದ್ದ ವೃಷಣ ತೆಗೆದು ಅದರ ಮೂಲಸ್ಥಾನದಲ್ಲಿ ಇರಿಸಿ, ಯಶಸ್ವಿ ಆಪರೇಶನ್ ನಡೆಸಿದ್ದಾರೆ.

ಹೊನ್ನಾವರದ ಸರ್ಕಾರಿ ಆಸ್ಪತ್ರೆ ವೈದ್ಯರಾಗಿರುವ ಡಾ ಗಜಾನನ ಭಟ್ಟರು ವಾರಕ್ಕೆ 2 ದಿನ ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುತ್ತಿದ್ದು, ಶಿರಸಿಯಲ್ಲಿ ಬಂದ ಇಂತಹ ಸವಾಲಿನ ಆಪರೇಶನನ್ನು ಅವರು ಯಶಸ್ವಿಯಾಗಿ ಮುಗಿಸಿದ್ದಾರೆ.