ಪುರಾವೆ ಕೇಳಿ ರೇಪ್ ಸಂತ್ರಸ್ತೆಗೆ ಕಿರುಕುಳ ನೀಡಬಾರದು : ಸುಪ್ರೀಂ

ನವದೆಹಲಿ : ಅತ್ಯಾಚಾರ ಸಂತ್ರಸ್ತೆಯೊಬ್ಬಳು ನೀಡುವ ಹೇಳಿಕೆ ನಂಬಲರ್ಹವಾಗಿದ್ದಲ್ಲಿ ಅದನ್ನು ಪುಷ್ಠೀಕರಿಸಲು ಬಲವಾದ ಸಾಕ್ಷ್ಯವೊದಗಿಸಬೇಕೆಂದು ಹೇಳಿ ನ್ಯಾಯಾಲಯಗಳು  ಆಕೆಗೆ ಕಿರುಕುಳ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತೆ ನೀಡುವ ಹೇಳಿಕೆ ಮಹತ್ವದ್ದಾಗಿರುತ್ತದೆ ಹಾಗೂ ಆರೋಪಿಯನ್ನು ಆಕೆ ನೀಡುವ ಹೇಳಿಕೆಗಳ ಆಧಾರದಲ್ಲಿಯೇ ಅಪರಾಧಿ ಎಂದು ಘೋಷಿಸಬಹುದಾಗಿದೆ. ಆಕೆಯ ಹೇಳಿಕೆಯನ್ನು ಪುಷ್ಟೀಕರಿಸಲು ಸಾಕಷ್ಟು ಸಾಕ್ಷ್ಯವೊದಗಿಸಬೇಕೆಂದು ಅದು ಬಹಳಷ್ಟು ಅಗತ್ಯವಿದೆಯೆಂದಾಗ ಮಾತ್ರ ನ್ಯಾಯಾಲಯಗಳು ಕೇಳಬಹುದಾಗಿದೆ ಎಂದೂ ಸುಪ್ರೀಂ ಕೋರ್ಟ್ ತಿಳಿಸಿದೆ.

“ಅತ್ಯಾಚಾರ ಸಂತ್ರಸ್ತೆ ನೀಡುವ ಹೇಳಿಕೆಯನ್ನು ದೃಢೀಕರಿಸಲು ಪುರಾವೆಯೊದಗಿಸುವಂತೆ ಹೇಳುವುದು ವಸ್ತುಶಃ ಗಾಯದ ಮೇಲೆ ಉಪ್ಪು ಸವರಿದಂತೆ. ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳಕ್ಕೊಳಗಾದ ಹುಡುಗಿ ಯಾ ಮಹಿಳೆ ನೀಡುವ ದೂರನ್ನು ಶಂಕೆಯ ಲೇಪನ ಹೊಂದಿದ  ಕನ್ನಡಕದ ಗಾಜುಗಳ ಮೂಲಕ ನೋಡಬಾರದು” ಎಂದು  ಜಸ್ಟಿಸ್ ಎ ಕೆ ಸಿಕ್ರಿ ಹಾಗೂ ಎ ಎಂ ಸಪ್ರೆ ಅವರನ್ನೊಳಗೊಂಡ ಪೀಠವು ಹಿಮಾಚಲ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರ ತೀರ್ಪು ನೀಡುವ ಸಂದರ್ಭ ಹೇಳಿದೆ.

ತನ್ನ 9 ವರ್ಷದ ಸೋದರ ಸೊಸೆಯ ಮೇಲೆ ಅತ್ಯಾಚಾರಗೈದ ವ್ಯಕ್ತಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್  ಈ ಹಿಂದೆ ಸಂತ್ರಸ್ತೆ ಮತ್ತಾಕೆಯ ತಾಯಿ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸವಿದೆಯೆಂಬ ಆಧಾರದಲ್ಲಿ ಆ ರಾಜ್ಯದ  ಹೈಕೋರ್ಟ್ ಆರೋಪಿಯನ್ನು ದೊಷಮುಕ್ತಗೊಳಿಸಿ ನೀಡಿದ ಆದೇಶವನ್ನು ರದ್ದುಗೊಳಿಸಿದೆ.