ಅತ್ಯಾಚಾರ ಆರೋಪಿಗೆ ಜೈಲು ಕೈದಿಗಳಿಂದ ಹಲ್ಲೆ

ಸಾಂದರ್ಭಿಕ ಚಿತ್ರ

ಬೆಳಗಾವಿ : ಎರಡೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಆರೋಪಿ ಬೆಳಗಾವಿಯ ಹಿಂಡಲಗ ಜೈಲಿನಲ್ಲಿ ಕೈದಿಯಾಗಿರುವ ಸುಭಾಷ್ ನಾಯಕ್ ಮೇಲೆ ಇತರ ಕೈದಿಗಳು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

ಶನಿವಾರದಂದು ವೈದ್ಯಕೀಯ ತಪಾಸಣೆ ಮತ್ತು ನ್ಯಾಯಾಂಗ ಕ್ರಮಗಳು ನಡೆದ ನಂತರ ಸುಭಾಷನನ್ನು ಹಿಂಡಲಗ ಜೈಲಿಗೆ ಕಳುಹಿಸಲಾಗಿತ್ತು. ಆತನ ಅಪರಾಧದ ಬಗ್ಗೆ ತಿಳಿದಾಗ ಇತರ ಕೈದಿಗಳು ಆಕ್ರೋಶದಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು 12 ಕೈದಿಗಳು ಆತನನ್ನು ಭದ್ರತಾ ಸಿಬ್ಬಂದಿ ಕೈಯಿಂದ ಸೆಳೆದುಕೊಂಡು ಹಲ್ಲೆ ನಡೆಸಿದ್ದಾರೆ. ನಂತರ ಇತರ ಭದ್ರತಾ ಸಿಬ್ಬಂದಿ ಆತನನ್ನು ರಕ್ಷಿಸಿ ಪ್ರತ್ಯೇಕ ಜೈಲಿನಲ್ಲಿಟ್ಟಿದ್ದಾರೆ.

“ಇಂತಹ ಹೀನಾಯ ಕೃತ್ಯ ಇನ್ಯಾರೂ ಮಾಡಬಾರದು ಎಂದು ಬುದ್ಧಿ ಕಲಿಸಲು ಆತನಿಗೆ ಹೊಡೆದಿದ್ದೇವೆ” ಎಂದು ಇತರ ಕೈದಿಗಳು ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ.

ತ್ತೀಚೆಗಿನ ದಿನಗಳಲ್ಲಿ ಮಕ್ಕಳ ಮೇಲೆ ಅಪರಾಧ ಎಸಗಿದ ಆರೋಪಿಗಳ ಮೇಲೆ ಜೈಲಿನಲ್ಲಿ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ.

ಎರಡು ವರ್ಷಗಳ ಹಿಂದೆ ಪ್ರತಿಷ್ಠಿತ ವಾಣಿಜ್ಯ ಕಾಲೇಜಿನಲ್ಲಿ ಚಾರ್ಟರ್ಡ್ ಅಕೌಂಟಂಟ್ ವಿದ್ಯಾರ್ಥಿಯಾಗಿದ್ದ ಪ್ರವೀಣ್ ಭಟ್ಟನನ್ನು ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಆರೋಪದಲ್ಲಿ ಇದೇ ಜೈಲಿಗೆ ಕರೆ ತಂದಾಗಲೂ ಕೈದಿಗಳು ಆತನ ಮೇಲೆ ದಾಳಿ ನಡೆಸಿದ್ದರು. ಪ್ರವೀಣ್ ಇಬ್ಬರು ಮಕ್ಕಳ ತಾಯಿ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದ. ಒಂದು ದಿನ ಪತಿ ಹೊರಗೆ ಹೋಗಿದ್ದಾಗ ಆಕೆಯ ಮನೆಗೆ ಹೋದ ಸಂದರ್ಭ ಜಗಳವಾಗಿ ಮಹಿಳೆ ಮತ್ತು ಆಕೆಯ ಮಕ್ಕಳನ್ನು ಕೊಲೆಗೈದಿದ್ದ. ಅಮಾಯಕ ಮಕ್ಕಳನ್ನು ಕೊಂದದ್ದಕ್ಕಾಗಿ ಪ್ರವೀಣ್ ಮೇಲೆ ಹಲ್ಲೆ ನಡೆಸಿದ್ದಾಗಿ ಆಗ ಜೈಲಿನ ಕೈದಿಗಳು ಹೇಳಿದ್ದರು.