ದೀಪಿಕಾಗಾಗಿ ಕತ್ರೀನಾ ಜೊತೆ ನಟಿಸಲು ನೋ ಎಂದ ರಣವೀರ್

ರಣವೀರ್ ಸಿಂಗ್ ತನ್ನ ಪ್ರೇಯಸಿ ದೀಪಿಕಾ ಪಡುಕೋಣೆಗಾಗಿ ಏನು ಮಾಡಲೂ ತಯಾರಿರುತ್ತಾನೆ ಎನ್ನುವುದಕ್ಕೆ ಈಗಾಗಲೇ ಹಲವು ನಿದರ್ಶನಗಳಿವೆ. ತನ್ನ ಹುಡುಗಿಗಾಗಿ ಗಂಟೆಗಟ್ಟಲೆ ಏರ್ಪೋರ್ಟಿನಲ್ಲಿ ಕಾಯುವುದಕ್ಕೂ ಅವನಿಗೆ ಬೇಸರವಿಲ್ಲ. ಡಿಪ್ಪಿಯನ್ನು ಖುಶಿಪಡಿಸುವ ಯಾವ ಅವಕಾಶವನ್ನೂ ರಣವೀರ್ ಮಿಸ್ ಮಾಡಿಕೊಳ್ಳುವುದಿಲ್ಲ. ಈಗ ದೀಪಿಕಾ ಪ್ರೀತ್ಯಾರ್ಥ ರಣವೀರ್ ಕತ್ರೀನಾ ಕೈಫ್ ಜೊತೆ ನಟಿಸುವ ಅವಕಾಶವನ್ನು ಕೈಚೆಲ್ಲಿದ್ದಾನೆ ಎನ್ನಲಾಗಿದೆ.

ದೀಪಿಕಾ ಹಾಗೂ ಕತ್ರೀನಾ ನಡುವೆ ಕ್ಯಾಟ್ ಫೈಟ್ ಹಲವು ಸಮಯಗಳಿಂದ ಜಾರಿಯಲ್ಲಿದೆ. ಈ ನಡುವೆ ಅವರಿಬ್ಬರೂ ಓಪನ್ನಾಗಿ ಒಬ್ಬರ ವಿರುದ್ಧ ಇನ್ನೊಬ್ಬರು ಹೇಳಿಕೆ ನೀಡಿರದಿದ್ದರೂ ಅವರ ನಡುವಿನ ಶೀತಲ ಸಮರ ಇನ್ನೂ ಮುಕ್ತಾಯವಾಗಿಲ್ಲ. ಇದೇ ಸಂದರ್ಭದಲ್ಲಿ ದೀಪಿಕಾ ಬಾಯ್ ಫ್ರೆಂಡ್ ರಣವೀರನಿಗೆ ಕತ್ರೀನಾ ಕೈಫ್ ನಟಿಸಲಿರುವ ನಿತ್ಯಾ ಮೆಹ್ರಾರ ಮುಂದಿನ ಚಿತ್ರಕ್ಕೆ ಆಫರ್ ಬಂದಿದೆ. ಕತ್ರೀನಾ ಜೊತೆ ರಣವೀರನಿಗೆ ಉತ್ತಮ ಗೆಳೆತನವಿದ್ದರೂ ಆತ ತನ್ನ ಲೇಡಿ ಲವ್ ದೀಪಿಕಾಗೆ ಬೇಸರವಾಗಬಹುದು ಎಂದೆಣಿಸಿ ಆ ಚಿತ್ರಕ್ಕೇ ನೋ ಎಂದಿದ್ದಾನೆ.

ದೀಪಿಕಾಳ ಮಾಜಿ ಲವ್ವರ್ ರಣಬೀರ್ ಕಪೂರ್ ಕತ್ರೀನಾ ಜೊತೆ ನಟಿಸಲು ಶುರು ಮಾಡಿದ ನಂತರ ಡಿಪ್ಪಿಗೆ ಕೈಕೊಟ್ಟಿದ್ದು ಈಗ ರಣವೀರ್ ಕೂಡಾ ಕ್ಯಾಟ್ ಜೊತೆ ನಟಿಸಿ ತನ್ನಿಂದ ದೂರವಾದರೆ ಎನ್ನುವ ಭಯ ಡಿಪ್ಪಿಗೆ ಇರುವುದು ಬಹುಶಃ ರಣವೀರನ ಗಮನಕ್ಕೆ ಬಂದಿದೆಯೇನೋ…ಹಾಗಾಗಿ ತನ್ನ ಪ್ರಿಯತಮೆಗೆ ನೋವು ಕೊಡುವ ದುಸ್ಸಾಹಸಕ್ಕೆ ಕೈಹಾಕುವುದೇ ಬೇಡವೆಂದು ರಣವೀರ್ ಈ ನಿರ್ಧಾರ ಕೈಗೊಂಡಿರಬಹುದು ಎನ್ನುವ ಊಹೆ ಬಾಲಿವುಡ್ ಪಂಡಿತರದ್ದು.

ಅಂದಹಾಗೆ ರಣವೀರ್ ತನ್ನ ಮನದನ್ನೆ ದೀಪಿಕಾಗೆ ಇನ್ನಷ್ಟು ಹತ್ತಿರವಾಗಲು ಆಕೆ ವಾಸವಿರುವ ಪ್ರಭಾದೇವಿ ಅಪಾರ್ಟ್‍ಮೆಂಟ್‍ನಲ್ಲಿಯೇ ಮನೆ ಖರೀದಿಸಲು ಮಾತುಕತೆ ನಡೆಸಿದ್ದಾನಂತೆ.