ಕೇಡಿ ಪೊಲೀಸ್ ಆಗಿ ರಣವೀರ್

ರಣವೀರ್ ಸಿಂಗ್ `ಪದ್ಮಾವತಿ’ ಸಿನಿಮಾದಲ್ಲಿ ವಿಲನ್ ಅಲ್ಲಾವುದ್ದೀನ್ ಖಿಲ್ಜಿಯಾಗಿ ಅಟ್ಟಹಾಸ ತೋರಿದ್ದರೆ ಮುಂದಿನ ವರ್ಷ ಕೇಡಿ ಪೊಲೀಸ್ ಅಧಿಕಾರಿಯಾಗಿ ತೆರೆಮೇಲೆ ಬರಲಿದ್ದಾನೆ. ಈ ಸಿನಿಮಾದ ಹೆಸರು `ಸಿಂಬಾ’ ಎಂದಾಗಿದ್ದು ಈ ಚಿತ್ರ ನಿರ್ಮಾಣದಲ್ಲಿ ಕರಣ್ ಜೋಹರ್ ಮತ್ತು ರೋಹಿತ್ ಶೆಟ್ಟಿ ಜೊತೆಯಾಗುತ್ತಿದ್ದಾರೆ. ನಿನ್ನೆ ಬೆಳಿಗ್ಗೆಯಷ್ಟೇ ಕರಣ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

`ಸಿಂಬಾ’ ಸಿನಿಮಾ 2015ರಲ್ಲಿ ತೆರೆಕಂಡ ಜೂನಿಯರ್ ಎನ್ಟಿಆರ್ ನಟನೆಯ ತೆಲುಗು ಚಿತ್ರ `ಟೆಂಪರ್’ ರಿಮೇಕ್ ಆಗಿದೆ. ರಣವೀರ್ ಚಿತ್ರದಲ್ಲಿ ಮೊದಲ ಬಾರಿಗೆ ಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಈ ಕುರಿತು ರೋಹಿತ್ ಶೆಟ್ಟಿ ಮಾತಾಡುತ್ತಾ “ಚಿತ್ರದ ಸ್ಕ್ರಿಪ್ಟ್ ರಣವೀರನಿಗೆ ಬಹಳ ಚೆನ್ನಾಗಿ ಹೊಂದುತ್ತದೆ. ಇದರಲ್ಲಿ ಸಿಕ್ಕಾಪಟ್ಟೆ ಆಕ್ಷನ್ ಸೀಕ್ವೆನ್ಸ್ ಇದ್ದು ರಣವೀರ್ ಹಿಂದೆಂದೂ ಕಾಣದ ಅವತಾರದಲ್ಲಿ ತೆರೆಯ ಮೇಲೆ ಬರಲಿದ್ದಾನೆ.” ಎಂದಿದ್ದಲ್ಲದೇ “ತೆಲುಗು ಚಿತ್ರದ ಶೇಕಡಾ 20 ಭಾಗ ಮಾತ್ರ ಈಗ ತಯಾರಿಸುತ್ತಿರುವ ಹಿಂದಿ ಸಿನಿಮಾ `ಸಿಂಬಾ’ಗೆ ಎರವಲು ಪಡೆಯಲಿದ್ದು ಉಳಿದೆಲ್ಲವೂ ಬಾಲಿವುಡ್ ಕಮರ್ಷಿಯಲ್ ಸಿನಿಮಾಗೆ ಬೇಕಾದ ರೀತಿಯ ಮಸಾಲಾ ಇರಲಿದೆ” ಎನ್ನುತ್ತಾರೆ.

ಚಿತ್ರದ ಉಳಿದ ಪಾತ್ರವರ್ಗದಲ್ಲಿ ಯಾರಿದ್ದಾರೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಚಿತ್ರ ಮುಂದಿನ ವರ್ಷ ಡಿಸೆಂಬರ್ 28ಕ್ಕೆ ತೆರೆಕಾಣಲು ಶೆಡ್ಯೂಲ್ ಆಗಿದೆ.