ರಣ್ಬೀರನ ದತ್ ಲುಕ್

ಇದೀಗ ಚಿತ್ರರಂಗ ಮೊದಲಿನಂತಿಲ್ಲ. ಹಿಂದಿನ ಶತಮಾನದಲ್ಲಿ ಪಾತ್ರಕ್ಕೆ ಸರಿಹೊಂದುವ ವಿಗ್ ಧರಿಸಿ ಉಡುಪಿನಲ್ಲಿಯೇ ಸ್ವಲ್ಪ ಆಚೀಚೆ ಮಾಡಿ ಪಾತ್ರಕ್ಕೆ ಸರಿಹೊಂದುವ ಗೆಟಪ್ ತಂದುಕೊಳ್ಳುತ್ತಿದ್ದರು. ಆದರೀಗ ಎಲ್ಲವೂ ನೈಜವಾಗಿ ಕಾಣಲೆಂದು ತಾವು ಯಾವ ರೋಲ್ ಮಾಡಲಿದ್ದೇವೋ ಅದಕ್ಕೆ ಸರಿಹೊಂದುವ ದೇಹ, ಕೂದಲು, ಲುಕ್ ಎಲ್ಲವನ್ನೂ ಪಡೆಯಲು ಆಕ್ಟರ್ಸ್ ಬಹಳ ಕಸರತ್ತು ಮಾಡುತ್ತಾರೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಆಮೀರ್ ಖಾನ್. ಪಾತ್ರಕ್ಕೆ ತಕ್ಕಂತೆ ಒಂದೇ ಚಿತ್ರದಲ್ಲಿ 25 ಕೆಜಿ ತೂಕವೂ ಹೆಚ್ಚಿಸಿಕೊಂಡು ಮತ್ತೆ ಸಣ್ಣಗಾಗಿದ್ದೂ ಇದೆ. ಧೋನಿ ಪಾತ್ರಕ್ಕಾಗಿ ಸುಶಾಂತ್ ಕೂದಲು ಬಿಟಿದ್ದಲ್ಲದೇ ಧೋನಿಯ ಬಾಡಿ ಲಾಂಗ್ವೇಜ್ ಕಲಿತು ಅಭಿನಯಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದು ಗೊತ್ತೇ ಇದೆ. ಇದೀಗ ರಣ್ಬೀರ್ ಕಪೂರ್ ಸರದಿ. ಸಂಜಯ್ ದತ್ ಜೀವನಾಧರಿತ ಸಿನಿಮಾದಲ್ಲಿ ನಟಿಸುವುದಕ್ಕೋಸ್ಕರ ರಣ್ಬೀರ್ 13ಕೆಜಿ ತೂಕ ಈಗಾಗಲೇ ಹೆಚ್ಚಿಸಿಕೊಂಡಿದ್ದಾನೆ.

ಸಂಜಯ್ ದತ್ ಮ್ಯಾನರಿಸಂ ಸ್ಟಡಿ ಮಾಡಲು ರಣ್ಬೀರ್ ಸಂಜು ಬಾಬಾ ಜೊತೆ ಹೆಚ್ಚೆಚ್ಚು ಸಮಯ ಕಳೆಯುತ್ತಿದ್ದಾನೆ. ಸಂಜಯ್ ಮೆಳ್ಳಗಣ್ಣಿನ ನೋಟವನ್ನೂ ಕಾಪಿ ಮಾಡಿದ್ದಾನೆ ರಣ್ಬೀರ್. ಸಂಜಯ್ ಹಾಗೂ ರಣ್ಬೀರ್ ಈಗ ಸಹೋದರರಂತೆ ಕಾಣುತ್ತಿದ್ದಾರೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಜಕುಮಾರ್ ಹಿರಾನಿ. ಚಿತ್ರದಲ್ಲಿ ಸಂಜಯ್ ತಂದೆ ಸುನಿಲ್ ದತ್ ಪಾತ್ರದಲ್ಲಿ ಪರೇಶ್ ರಾವಲ್ ನಟಿಸಲಿದ್ದಾರೆ. ತಾಯಿ ನರ್ಗೀಸ್ ದತ್ ಪಾತ್ರದಲ್ಲಿ ಮನಿಷಾ ಕೊೈರಾಲಾ ಬಣ್ಣಹಚ್ಚಲಿದ್ದಾಳೆ. ಅನುಷ್ಕಾ ಶರ್ಮಾ, ಸೋನಂ ಕಪೂರ್ ಹಾಗೂ ದಿಯಾ ಮಿರ್ಜಾ ಕೂಡಾ ಈ ಸಿನಿಮಾದ ಮುಖ್ಯ ತಾರಾಗಣದಲ್ಲಿದ್ದಾರೆ.