ಕಾಡುತ್ಪತ್ತಿ ಹೆಸರಿನಲ್ಲಿ ಅಕ್ರಮ ಹಾಲುಮಡ್ಡಿ ಸಂಗ್ರಹ

ಮರಗಳ ಮಾರಣ ಹೋಮ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೇತ್ರಾವತಿ ನದಿ ತಿರುಗಿಸುವ ಹೆಸರಿನಲ್ಲಿ ರಾಜ್ಯ ಸರಕಾರವು ಪಶ್ಚಿಮಘಟ್ಟ ಪ್ರದೇಶದ ವಿನಾಶಕ್ಕೆ ಮುಂದಾಗಿದೆ. ಯೋಜನೆ ಹೆಸರಿನಲ್ಲಿ ಲಕ್ಷಾಂತರ ಮರಗಳನ್ನು ಕಡಿದು ಉರುಳಿಸಲಾಗುತ್ತಿದೆ. ಇದೇ ವೇಳೆ ಕಾಡುತ್ಪತ್ತಿ ಸಂಗ್ರಹದ ಹೆಸರಿನಲ್ಲಿ ಮರಗಳನ್ನು ಅನಧಿಕೃತವಾಗಿ ನಾಶ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಇಂತಹ ಕೆಲಸಕ್ಕೆ ಕೆಲವು ಭ್ರಷ್ಟ ಅಧಿಕಾರಿಗಳು ಕೂಡಾ ಬೆಂಗಾವಲಾಗಿ ನಿಂತಿದ್ದಾರೆ.

ಆದಾಯಕ್ಕಾಗಿ ಅರಣ್ಯ ಇಲಾಖೆಯು ತನ್ನ ವ್ಯಾಪ್ತಿಗೆ ಬರುವಂತಹ ಕಾಡುಗಳಲ್ಲಿ ಸುಗಂಧ ದ್ರವ್ಯಕ್ಕಾಗಿ ಉಪಯೋಗಿಸುವ ಹಾಲುಮಡ್ಡಿ ಮರಗಳ ತೋಪುಗಳನ್ನು ನೆಟ್ಟು ಬೆಳೆಸುತ್ತಿದೆ. ಇದರ ಫಸಲನ್ನು ತೆಗೆಯುವುದಕ್ಕೋಸ್ಕರ ಪ್ರತಿವರ್ಷ ಟೆಂಡರ್ ಕರೆಯುತ್ತಿದ್ದು, ಹೆಚ್ಚಿನ ಬಿಡ್ ಮೊತ್ತವನ್ನು ಕೊಡುವವನಿಗೆ  ಈ ಮರಗಳನ್ನು ನೀಡಲಾಗುತ್ತಿದೆ. ಆದರೆ ಈ ಬಾರಿ ಮರಗಳನ್ನು ಲೆಕ್ಕ ಮಾಡಲು ಮಾತ್ರ ಅರಣ್ಯ ಇಲಾಖೆ ಅವಕಾಶ ನೀಡಿದ್ದರೂ, ಟೆಂಡರ್ ಪಡೆದ ವ್ಯಕ್ತಿಗಳು ಅಕ್ರಮವಾಗಿ ಹಾಲುಮಡ್ಡಿಯನ್ನು ಸಂಗ್ರಹಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಮರಗಳನ್ನೂ ಕಡಿದು ಉರುಳಿಸಿ ಮಾರಣ ಹೋಮಕ್ಕೆ ಮುಂದಾಗಿದ್ದಾರೆ.

ಮರ-ಗಿಡಗಳಿಂದ ತುಂಬಿ ತುಳುಕುತ್ತಿದ್ದ ಪುತ್ತೂರಿನ ಗೋಳಿತ್ತೊಟ್ಟು ಮೀಸಲು ಅರಣ್ಯವೀಗ ಬೋರುಗುಡ್ಡೆಯಾಗಿ ಮಾರ್ಪಟ್ಟಿದೆ. ಅರಣ್ಯ ಇಲಾಖೆಯು ಆದಾಯಕ್ಕಾಗಿ ಈ ಕಾಡಿನಲ್ಲಿ ಸಾವಿರಾರು ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸುವಂತಹ ಹಾಲುಮಡ್ಡಿಯ ಮರಗಳನ್ನು ನೆಟ್ಟು ಸಾಕುತ್ತಿದೆ. ಈ ಹಾಲುಮಡ್ಡಿ ಮರಗಳು ಬೆಳೆದು ಅದರಿಂದ ಹಾಲುಮಡ್ಡಿ ಅಂಟು ಬರುವ ಸಂದರ್ಭದಲ್ಲಿ ಈ ಮರಗಳನ್ನು ಹೊರ ವ್ಯಕ್ತಿಗಳಿಗೆ ಟೆಂಡರ್ ಮೂಲಕ ನೀಡುತ್ತಿದ್ದು, ಟೆಂಡರ್ ಪಡೆದಂತಹ ವ್ಯಕ್ತಿಯು ಆ ಮರಗಳಿಂದ ಹಾಲುಮಡ್ಡಿಯನ್ನು ಸಂಗ್ರಹಿಸಿ ಮಾರಾಟ ಮಾಡುವುದು ಸಾಮಾನ್ಯವಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ಹಾಲುಮಡ್ಡಿಯನ್ನು ಸಂಗ್ರಹಿಸಲು ಗುತ್ತಿಗೆ ಪಡೆದಿರುವಂತಹ ವ್ಯಕ್ತಿಗಳು ಕೇವಲ ಹಾಲುಮಡ್ಡಿಯನ್ನು ಸಂಗ್ರಹಿಸುವುದಲ್ಲದೆ, ಅತಿಯಾಸೆಗೆ ಒಳಗಾಗಿ ಮರದಿಂದ ಬಂದಷ್ಟು ಬರಲಿ ಎನ್ನುವ ಕಾರಣಕ್ಕೆ ಮರವನ್ನೇ ಕಡಿಯುತ್ತಿದ್ದಾರೆ. ಈ ಕಾರಣಕ್ಕಾಗಿ ಹಾಲುಮಡ್ಡಿ ಮರಗಳು ಇಂದು ಗೋಳಿತೊಟ್ಟು, ಪುದುವೆಟ್ಟು ಹಾಗೂ ಇತರ ಕಾಡುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆಲಕ್ಕುರುಳುತ್ತಿವೆ.

ಕಾಡಿನಲ್ಲಿರುವ ಮರಗಳನ್ನು ಲೆಕ್ಕಾಚಾರ ಮಾಡಿದ ಬಳಿಕ ಆ ಮರಗಳಿಂದ ಹಾಲುಮಡ್ಡಿಯನ್ನು ಸಂಗ್ರಹಿಸಲು ಅನುಮತಿಯನ್ನು ನೀಡಲಾಗುತ್ತಿದೆ. ಆದರೆ  ಬಾರಿ ಹಾಲುಮಡ್ಡಿ ಸಂಗ್ರಹಿಸುವ ಮುನ್ನ  ವ್ಯಕ್ತಿಯೊಬ್ಬರಿಗೆ ಅರಣ್ಯ ಇಲಾಖೆಯು ಕೇವಲ ಮರಗಳ ಲೆಕ್ಕಾಚಾರಕ್ಕಾಗಿ ಮಾತ್ರ ಅನುಮತಿಯನ್ನು ನೀಡಿದ್ದರೂ, ಟೆಂಟರ್ ಪಡೆದಿರುವ ವ್ಯಕ್ತಿಯು ಅಕ್ರಮವಾಗಿ ಹಾಲುಮಡ್ಡಿಯನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಪುತ್ತೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಹಾಲುಮಡ್ಡಿ ತೆಗೆಯುವ ದಂಧೆಯು ನಿರಂತರವಾಗಿ ನಡೆಯುತ್ತಿದೆ.