ನ್ಯಾ ವಿ ಶೆಟ್ಟಿ ಲೋಕಾ ನೇಮಕಕ್ಕೆ ರಾಮಸ್ವಾಮಿ, ಹಿರೇಮಠ ವಿರೋಧ

ಸುಳ್ಳು ಪ್ರಮಾಣಪತ್ರ ನೀಡಿ ಸೈಟ್ ಪಡೆದ ಆರೋಪ

ಬೆಂಗಳೂರು : ಲೋಕಾಯುಕ್ತ ಸ್ಥಾನಕ್ಕೆ ಸರಕಾರ ಮಾಜಿ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ವಿಶ್ವನಾಥ್ ಶೆಟ್ಟಿಯವರನ್ನು ನೇಮಕಗೊಳಿಸುವ ಸಾಧ್ಯತೆಗಳು ನಿಚ್ಚಳವಾಗಿರುವಂತೆಯೇ ಭೂಕಬಳಿಕೆ ಕುರಿತ ಜಂಟಿ ಸದನ ಸಮಿತಿಯ ಮಾಜಿ ಅಧ್ಯಕ್ಷ ಎ ಟಿ ರಾಮಸ್ವಾಮಿ  ಇದರ ವಿರುದ್ಧ ಅಪಸ್ವರ ಎತ್ತಿದ್ದಾರೆ.

ಜಸ್ಟಿಸ್ ಶೆಟ್ಟಿ ನ್ಯಾಯಾಂಗ ಇಲಾಖೆಯ ನೌಕರರ ಸಂಘದ ಸದಸ್ಯರಾಗಿದ್ದುಕೊಂಡು `ನಿವೇಶನ ರಹಿತ’ ಎಂಬ ಸುಳ್ಳುಪ್ರಮಾಣ ಪತ್ರ ಪಡೆದು ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘದಿಂದ  ನಿವೇಶನವನ್ನು ಪಡೆದಿದ್ದಾರೆಂದು ಆರೋಪಿಸಿರುವ ರಾಮಸ್ವಾಮಿ, ಹೈಕೋರ್ಟ್ ಆದೇಶದ ಪ್ರಕಾರ ನ್ಯಾಯಾಧೀಶರು  ಸಂವಿಧಾನ ನಿಯೋಜಿತ ಪ್ರತಿನಿಧಿಗಳೇ ಹೊರತು ನೌಕರರಲ್ಲವಾಗಿರುವುದರಿಂದ ಅವರು ನ್ಯಾಯಾಂಗ ನೌಕರರ ಸಂಘದಿಂದ ನಿವೇಶನ ಪಡೆದಿರುವುದು ಸರಿಯಲ್ಲ ಎಂದು ವಾದಿಸಿದ್ದಾರೆ.

“ಹಿಂದಿನ ಲೋಕಾಯುಕ್ತ ಜಸ್ಟಿಸ್ ಭಾಸ್ಕರ್ ರಾವ್ ನೇಮಕಾತಿ ಸಂದರ್ಭ ಕೂಡ ಇದೇ ಎಚ್ಚರಿಕೆಯನ್ನು ನೀಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದ ಕಾರಣ ಮುಂದೆ ಅವರಿಂದಾಗಿ ಲೋಕಾಯುಕ್ತ ಸಂಸ್ಥೆಗೇ ಕೆಟ್ಟ ಹೆಸರು ಬರುವಂತಾಯಿತು” ಎಂದು ರಾಮಸ್ವಾಮಿ ಹೇಳಿದ್ದಾರೆ.

ಹುಬ್ಬಳ್ಳಿಯ ಸಮಾಜ ಪರಿವರ್ತನಾ ಸಮುದಾಯದ  ಎಸ್ ಆರ್ ಹಿರೇಮಠ್ ಕೂಡ ಶೆಟ್ಟಿಯವರನ್ನು ಲೋಕಾಯುಕ್ತ ಸ್ಥಾನಕ್ಕೆ ನೇಮಕ ಮಾಡುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದು ಬೆಂಗಳೂರಿನ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘದಿಂದ ಅವರು ನಿಯಮಾವಳಿ ಮೀರಿ ಸೈಟ್ ಪಡೆದಿದ್ದಾರೆಂದು ಆರೋಪಿಸಿದ್ದಾರೆ.

ಆರ್ ಟಿ ನಗರದಲ್ಲಿ ಬಿಡಿಎ ಸೈಟ್ ಒಂದನ್ನು ಹೊಂದಿರುವ ಹೊರತಾಗಿಯೂ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ  ನ್ಯಾಯಾಂಗ ಸಂಘದಿಂದ ಸೈಟ್ ಪಡೆದಿದ್ದಾರೆಂಬ ಆರೋಪವನ್ನು ಶೆಟ್ಟಿ  ಈಗಾಗಲೇ  ಎದುರಿಸುತ್ತಿದ್ದಾರೆ.

ಈ ಹಿಂದೆ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಲ್ಪಟ್ಟಿದ್ದ ಜಸ್ಟಿಸ್ ಎಸ್ ಆರ ನಾಯಕ್ ಅವರ ಹೆಸರನ್ನು ರಾಜ್ಯಪಾಲರು ಇದೇ ಕಾರಣಕ್ಕೆ ತಿರಸ್ಕರಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ನ್ಯಾಯಾಧೀಶರುಗಳಾದ ಜಸ್ಟಿಸ್ ವಿಶ್ವನಾಥ್ ಶೆಟ್ಟಿ, ಜಸ್ಟಿಸ್ ಎಚ್ ಕೆ ಪಾಟೀಲ್ ಹಾಗೂ ಹಾಲಿ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿಯವರ ಹೆಸರುಗಳು ಪ್ರಸ್ತಾಪಗೊಂಡಿದ್ದವು.