ರಾಮಚಂದ್ರಾಪುರ ಮಠಕ್ಕೆ ತಕ್ಷಣ ಆಡಳಿತಾಧಿಕಾರಿ ನೇಮಕ ಕೋರಿಕೆ

ರಾಘವೇಶ್ವರ ಸ್ವಾಮಿ

ವಿಚಾರಣೆ ಜುಲೈ 27ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು : ಹೊಸನಗರ ರಾಮಚಂದ್ರಾಪುರ ಮಠಕ್ಕೆ ತಕ್ಷಣ ಆಡಳಿತಾಧಿಕಾರಿ ನೇಮಿಸುವಂತೆ ಮುಜರಾಯಿ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಎದುರ್ಕಳ ಈಶ್ವರ ಭಟ್  ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಶುಕ್ರವಾರ ವಿಚಾರಣೆ ನಡೆಸಿದ  ಹೈಕೋರ್ಟಿನ  ವಿಭಾಗೀಯ ಪೀಠವು ಎರಡೂ ಕಡೆಗಳ ವಕೀಲರುಗಳ ವಾದವಿವಾದ ಆಲಿಸಿ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದೆ. ಈ ನಿಟ್ಟಿನಲ್ಲಿ ಈ ಹಿಂದೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ

ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟಿನ ಮುಂದೆ ಸಲ್ಲಿಕೆಯಾಗಿರುವ ಅಪೀಲಿನ ವಿಚಾರಣೆ ಮುಗಿದು ಆದೇಶ ಹೊರಬೀಳುವತನಕ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಭಟ್ ಪರ ವಕೀಲ ಎಸ್ ಎಸ್ ನಾಗಾನಂದ ನ್ಯಾಯಾಲಯಕ್ಕೆ ಮನವಿ ಮಾಡಿದರೆ, ಈಗಾಗಲೇ ಮುಖ್ಯ ಕಾರ್ಯದರ್ಶಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲಿನ ವಿಚಾರಣೆಯನ್ನು ಏಕಸದಸ್ಯ ಪೀಠ ನಡೆಸುತ್ತಿರುವುದರಿಂದ ಈ ಮನವಿ ಒಪ್ಪತಕ್ಕಂತಹುದಲ್ಲ ಎಂದು ಮಠದ ಪರ ವಕೀಲರು ವಾದಿಸಿದರು.

ಮಠ ಕಟ್ಟಡ : ಬೆಂಗಳೂರಿನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ಕಟ್ಟಡ ನಿರ್ಮಾಣ ಪರವಾನಗಿ ರದ್ದು ಪಡಿಸಿರುವುದರ ವಿರುದ್ಧ ರಾಘವೇಶ್ವರ ಸ್ವಾಮಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಜಸ್ಟಿಸ್ ವಿನೀತ್ ಕೊಠಾರಿ ಅವರ ಏಕಸದಸ್ಯ ಪೀಠ ವಿಚಾರಣೆ  ನಡೆಸಿದ್ದು ಈ ಸಂದರ್ಭ ಹಾಜರಿದ್ದ ಬಿಡಿಎ ನಿವೃತ್ತ ಇಂಜಿನಿಯರ್ ರಾಜಗೋಪಾಲ್ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಾ, ಬಿಡಿಎ ಮಾಜಿ ಆಯುಕ್ತ ಶ್ಯಾಮ್ ಭಟ್ ಅವರ ಮೌಖಿಕ ಆದೇಶದ ಮೇರೆಗೆ ನಿರ್ಮಾಣ ಪರವಾನಗಿ ರದ್ದು ಪಡಿಸಲಾಗಿತ್ತು ಎಂದಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದ ನ್ಯಾಯಾಲಯ ಬಿಡಿಎ ಮಾಜಿ ಆಯುಕ್ತರ ಮೌಖಿಕ ಆದೇಶ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿದೆ.


ಶ್ಯಾಮ ಶಾಸ್ತ್ರಿ ಕೇಸಿನ ಚಾರ್ಜಶೀಟ್ ಸಲ್ಲಿಕೆ

ವಿಳಂಬಕ್ಕೆ ಹೈ ತರಾಟೆ

 ಬೆಂಗಳೂರು : ಹೊಸನಗರ ರಾಮಚಂದ್ರಾಪುರದ ರಾಘವೇಶ್ವರ ಸ್ವಾಮಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ರಾಮಕಥಾ ಗಾಯಕಿ ಪ್ರೇಮಲತಾ ಅವರ ಪತಿ ದಿವಾಕರ ಶಾಸ್ತ್ರಿಯ ಕಿರಿಯ ಸಹೋದರ ಶ್ಯಾಮ ಶಾಸ್ತ್ರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ

ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ಆಗುತ್ತಿರುವ ವಿಳಂಬಕ್ಕೆ  ಹೈಕೋರ್ಟ್ ಶುಕ್ರವಾರ  ಪ್ರಾಸಿಕ್ಯೂಶನ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತಲ್ಲದೆ ಮುಂದಿನೆರಡು ವಾರಗಳಲ್ಲಿ  ತನಿಖೆ ಪ್ರಗತಿಯ ವರದಿ ಸಲ್ಲಿಸುವಂತೆ  ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.

2014ರ ಆಗಸ್ಟ್ 31ರಂದು  ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದಲ್ಲಿ ಶ್ಯಾಮ ಶಾಸ್ತ್ರಿ ಶಂಕಾಸ್ಪದವಾಗಿ ಸಾವನ್ನಪ್ಪಿದ್ದರು. ಅವರು ತಮಗೆ ತಾವೇ ಗುಂಡಿಕ್ಕಿಗೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ಹೇಳಲಾಗಿತ್ತಾದರೂ ಅವರ ಸಾವಿನ ಸುತ್ತ ಹಲವಾರು ಸಂಶಯಗಳೆದ್ದಿತ್ತು.