ಭಕ್ತರ ಲಿಂಗಛೇದನಗೈದು ಅವರಿಂದ ಅಕ್ರಮ ಭೂವ್ಯವಹಾರ ನಡೆಸುತ್ತಿದ್ದ ರಾಂ ರಹೀಂ

ಚಂಡೀಗಢ : ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಛಾ ಸೌಧಾದ ಮುಖ್ಯಸ್ಥ ರಾಮ್ ರಹೀಂ ಸಿಂಗ್, ತನ್ನ ಅನುಯಾಯಿಗಳ ಲಿಂಗಛೇದನಗೈದು  ಅವರ ಮುಖಾಂತರ ಭೂಮಿ  ಖರೀದಿಸಿ ನಂತರ ಅವರಿಗರಿವಿಲ್ಲದಂತೆಯೇ ತನ್ನ ಡೇರಾ ಸಚ್ಛಾ ಸೌಧಾದ ಹೆಸರಿಗೆ ಅದನ್ನು ವರ್ಗಾಯಿಸುತ್ತಿದ್ದನೆಂದು ತನಿಖೆ ನಡೆಸುತ್ತಿರುವ ಸಿಬಿಐ ಕಂಡುಕೊಂಡಿದೆ.

ಡೇರಾದ ಸುಮಾರು 400 ಅನುಯಾಯಿಗಳ ಲಿಂಗಛೇದನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈ ನಿಟ್ಟಿನಲ್ಲಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು  ಈಗಾಗಲೇ ನ್ಯಾಯಾಲಯಕ್ಕೆ ಹಲವಾರು ಮುಖ್ಯ ಮಾಹಿತಿಗಳನ್ನು ಒದಗಿಸಿ  ಡೇರಾ ಮುಖ್ಯಸ್ಥನ ಶಂಕಾಸ್ಪದ ಭೂವ್ಯವಹಾರಗಳತ್ತ ಬೆಳಕು ಚೆಲ್ಲಿದೆ.

ತನಿಖೆಯಿಂದ ತಿಳಿದುಕೊಂಡಂತೆ ಅನುಯಾಯಿಗಳ ಮನವೊಲಿಸಿ ಅವರ ಲಿಂಗಛೇದನಗೈದ ನಂತರ  ಅವರ ಹೆಸರಿನಲ್ಲಿ  ಡೇರಾ ಭೂಮಿಯನ್ನು ಖರೀದಿಸುತ್ತಿತ್ತಲ್ಲದೆ ಅನುಯಾಯಿಗಳಿಗೆ  ವಿವಿಧ ದಾಖಲೆಗಳಿಗೆ ಸಹಿ ಹಾಕುವಂತೆ ಮಾಡಲಾಗುತ್ತಿತ್ತು. ನಂತರ ಈ ಜಮೀನುಗಳ ಪವರ್ ಆಪ್ ಅಟಾರ್ನಿ ಪಡೆದುಕೊಂಡು ಅವರ  ಅರಿವಿಗೆ ಬಾರದಂತೆಯೇ ಈ ಭೂಮಿ ಡೇರಾ ಹೆಸರಿಗೆ  ದಾನವೆಂಬಂತೆ ಬಿಂಬಿಸಿ ವರ್ಗಾಯಿಸಲಾಗುತ್ತಿತ್ತು.

ಲಿಂಗಛೇದಗೊಂಡ ಅನುಯಾಯಿಗಳು ಭೂ ವ್ಯವಹಾರಗಳ ಬಗ್ಗೆ ಏನನ್ನೂ ಪ್ರಶ್ನಿಸುವ ಹಾಗಿರಲಿಲ್ಲ. ಈ ರೀತಿಯಾಗಿ ಮೋಸದಿಂದ ಭೂವ್ಯವಹಾರ ನಡೆಸಿದ ಒಂದು ಡಜನಿಗೂ ಅಧಿಕ ಪ್ರಕರಣಗಳನ್ನು ತನಿಖಾ ಏಜನ್ಸಿ  ಪತ್ತೆ ಹಚ್ಚಿದೆ.

ಪ್ರಸಕ್ತ ಡೇರಾ ಮುಖ್ಯಸ್ಥ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ನಡೆಸಿದ ಅತ್ಯಾಚಾರ ಪ್ರಕರಣದಲ್ಲಿ  20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಅನುಯಾಯಿಗಳ ಅಕ್ರಮ ಲಿಂಗಛೇದನ ಪ್ರಕರಣ  ಹಾಗೂ ಪತ್ರಕರ್ತನೊಬ್ಬನ ಕೊಲೆ ಸಹಿತ ಎರಡು ಕೊಲೆ ಪ್ರಕರಣಗಳೂ ಆತನ ಮೇಲಿವೆ.

 

LEAVE A REPLY