ರಾಮ ಮಂದಿರ ನಿರ್ಮಾಣ ಮಾಡೇ ಸಿದ್ಧ : ಪೇಜಾವರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ರಾಮಮಂದಿರ ನಿರ್ಮಾಣ ವಿಳಂಬವಾಗುತ್ತಿರುವುದರಿಂದ ಇಡೀ ಹಿಂದೂ ಸಮುದಾಯ ಪೇಚಾಟಕ್ಕೆ ಸಿಲುಕಿದೆ. ಆದ್ದರಿಂದ ಎಷ್ಟೇ ಅಡೆತಡೆ ಬಂದರೂ, ಖರ್ಚಾದರೂ ರಾಮ ಮಂದಿರ ನಿರ್ಮಾಣ ಮಾಡೇ ಸಿದ್ಧ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿ ಹೇಳಿದರು.

ಮಂಗಲ ಗೋಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, “ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಇನ್ನೂ ಗೊಂದಲಗಳು ಮುಂದುವರಿಯುತ್ತಲೇ ಇವೆ” ಎಂದರು.

“ಹಿಂದೂಗಳು ಅಪಾರ ಸಂಖ್ಯೆಯಲ್ಲಿರುವ ಇಲ್ಲಿ ಆರಾಧ್ಯದೇವರಾಗಿರುವ ರಾಮನಿಗೆ ಮಂದಿರ ಕಟ್ಟಲು ಸಮಸ್ಯೆ ಎದುರಿಸುತ್ತಿದ್ದೇವೆ. ಹಲವು ವಿಚಾರಗಳು ಮಂದಿರ ನಿರ್ಮಾಣಕ್ಕೆ ಅಡ್ಡಿಯಾದಂತಿವೆ. ನಮಗೆ ಸ್ಪಷ್ಟ ನಿಲುವು ತಳೆಯೋದಿಕ್ಕೆ ಸಾಧ್ಯವಾಗಿಲ್ಲ” ಎಂದರು.

“`ಹಿಂದೂಗಳಾದ ನಾವೆಲ್ಲರೂ ಪವಿತ್ರ ಗೋಮಾತೆಯನ್ನು ಒಂದು ನಿಧಿಯನ್ನಾಗಿ ಕಾಣಬೇಕು. ಮಾನವೀಯತೆ ಮತ್ತು ಸ್ಪೂರ್ತಿಯಿಂದ ಇವುಗಳ ಪಾಲನೆ, ರಕ್ಷಣೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ರಕ್ಷಣೆ ಮತ್ತು ಪೋಷಣೆ ಹೆಚ್ಚಾಗುತ್ತಿರುವುದು ಖುಷಿಯ ಸಂಗತಿ” ಎಂದರು.

“ಜಾನುವಾರು ರಕ್ಷಣೆ ನಮ್ಮ ದಿನನಿತ್ಯದ ಬದುಕಿನಲ್ಲಿ ಅತ್ಯಂತ ಪ್ರಯೋಜನಕಾರಿ” ಎಂದ ಅವರು, “ಮನುಷ್ಯನಿಗೆ ಹಲವು ತರದಲ್ಲಿ ಗೋ ಬದುಕಿಗೆ ಆಸರೆಯಾಗಿದೆ” ಎಂದರು.