ಕನ್ನಡಿಗರಿಗೆ ಮಾತ್ರ ಅವಕಾಶ ಕೋರಿ ಬ್ಯಾಂಕಿಂಗ್ ಪರೀಕ್ಷಾ ಕೇಂದ್ರಗಳನ್ನು ಮುಚ್ಚಿಸಿದ ರಕ್ಷಣಾ ವೇದಿಕೆ

ಬೆಂಗಳೂರು : ಕನ್ನಡ ಮಾತನಾಡುವ ಅಭ್ಯರ್ಥಿಗಳಿಗೆ ಮಾತ್ರ ಉದ್ಯೋಗ ನೀಡಬೇಕೆಂಬ ಬೇಡಿಕೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು  ನಿನ್ನೆ ರಾಜ್ಯಾದ್ಯಂತ ವಿವಿಧ ಬ್ಯಾಂಕಿಂಗ್ ಪರೀಕ್ಷಾ ಕೇಂದ್ರಗಳನ್ನು ಬಲವಂತವಾಗಿ ಮುಚ್ಚಿಸಿದ ಪರಿಣಾಮ ಗ್ರಾಮೀಣ ಬ್ಯಾಂಕುಗಳ ಕ್ಲರಿಕಲ್ ಹುದ್ದೆಗಳಿಗಾಗಿ ನಡೆಯಬೇಕಿದ್ದ ಪರೀಕ್ಷೆಗೆ ಹಾಜರಾಗಲು ಆಗಮಿಸಿದ್ದ ಸಾವಿರಾರು ಉದ್ಯೋಗಾಕಾಂಕ್ಷಿಗಳು  ನಿರಾಸೆ ಹೊಂದುವಂತಾಯಿತು.

ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಖಾಸಗಿ ಕಾಲೇಜೊಂದರ ಹೊರಗೆ ಜಮಾಯಿಸಿದ್ದ ನೂರಾರು ಪ್ರತಿಭಟನಾಕಾರರು ಕಾಲೇಜಿನ ಗೇಟನ್ನು ಮುಚ್ಚಿದರು. ರಾಜ್ಯದ ಹಲವು ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳ ಬೆಂಬಲದೊಂದಿಗೆ ವೇದಿಕೆ ಕಾರ್ಯಕರ್ತರು ಅವರ ಹಾಲ್ ಟಿಕೆಟ್ಟುಗಳನ್ನೂ ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕಿಂಗ್ ಪರೀಕ್ಷೆಗೆ ಹಾಜರಾಗಲಿದ್ದ ಸಲೀಂ ಎಂಬಾತ ತನ್ನ ನಾಡಿ ಕುಯ್ದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದು ಈ ಘಟನೆ ಬಗ್ಗೆ ತಿಳಿಯುತ್ತಲೇ ಉದ್ರಿಕ್ತ ಗುಂಪೊಂದು ಕಾಲೇಜಿನತ್ತ ಕಲ್ಲು ಎಸೆಯಲು ಆರಂಭಿಸಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರಲ್ಲದೆ  ಹಲವರನ್ನು ವಶಕ್ಕೆ ಪಡೆದುಕೊಂಡರು. ರಾಯಚೂರು, ಗುಲ್ಬರ್ಗ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ.

“ಪರೀಕ್ಷೆಗಳು ಗ್ರಾಮೀಣ ಬ್ಯಾಂಕುಗಳ ಕ್ಲರಿಕಲ್ ಹುದ್ದೆಗಳಿಗೆ ನಡೆಯಬೇಕಿತ್ತು. ಈ ಗ್ರಾಮೀಣ ಬ್ಯಾಂಕುಗಳ ಹೆಚ್ಚಿನ ಗ್ರಾಹಕರು  ಕನ್ನಡ ಮಾತನಾಡುವವರಾಗಿದ್ದಾರೆ.  ಹೀಗಿರುವಾಗ ಕನ್ನಡ ತಿಳಿಯದವರನ್ನು ಆರಿಸುವುದು ಹೇಗೆ ಸಾಧ್ಯ ” ಎಂದು ರಕ್ಷಣಾ ವೇದಿಕೆ ಅಧ್ಯಕ್ಷ ಟಿ ನಾರಾಯಣಗೌಡ ಪ್ರಶ್ನಿಸಿದ್ದಾರೆ. “2014ರ ತನಕ ಈ ಹುದ್ದೆಗಳು ಕರ್ನಾಟಕದವರಿಗೆ ಮೀಸಲಾಗಿತ್ತು. ಆದರೆ ನಂತರ ಅದನ್ನು ಅಖಿಲ ಭಾರತ ಮಟ್ಟದ ಪರೀಕ್ಷೆಯನ್ನಾಗಿಸಲಾಯಿತು. ಇದು ಒಪ್ಪತಕ್ಕಂತಹುದ್ದಲ್ಲ” ಎಂದರು.