`ಪದ್ಮಾವತಿ’ ಚಿತ್ರಕ್ಕೆ ಗುಜರಾತಿನಲ್ಲಿ ತೀವ್ರ ವಿರೋಧ ; ರಜಪೂತರಿಂದ ಪ್ರತಿಭಟನೆ

ಮುಂಬೈ : ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ `ಪದ್ಮಾವತಿ’ ಹಿಂದಿ ಚಿತ್ರದ ಬಿಡುಗಡೆ ವಿರೋಧಿಸಿ ಅಸೆಂಬ್ಲಿ ಚುನಾವಣೆ ನಡೆಯಲಿರುವ ಗುಜರಾತ್ ಹಾಗೂ ಮುಂಬೈಯಲ್ಲಿ ರಜಪೂತ ಸಮುದಾಯ ಹಾಗೂ ಸಂಬಂಧಿಸಿದ ಸಂಘಟನೆಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿದೆ. ವಾಸ್ತವಕ್ಕೆ ಭಿನ್ನವಾಗಿ ನಿರ್ಮಿಸಲಾಗಿರುವ ಈ ಚಿತ್ರ ನಿಷೇಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ನಿನ್ನೆ ಭನ್ಸಾಲಿಯ ಮುಂಬೈ ಕಚೇರಿ ಎದುರೂ ಪ್ರತಿಭಟನೆ ನಡೆಯಿತು. ಈ ವಿಷಯದಲ್ಲಿ ಗುಜರಾತ್ ಆಡಳಿತ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. “ಮೊದಲು ಚಿತ್ರವನ್ನು ಚಿತ್ರವಾಗಿ ನೋಡಿ. ಬದಲಾಗಿ ಇತಿಹಾಸ ಎಂದು ನೋಡಬೇಡಿ” ಎಂದು ಕೇಂದ್ರ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ ಹೇಳಿದ್ದರೆ, ಹರ್ಯಾಣ ಸಚಿವರೊಬ್ಬರು ಚಿತ್ರದಲ್ಲಿ ಕತ್ತರಿ ಪ್ರಯೋಗಕ್ಕೆ ಸೂಚಿಸಿದ್ದಾರೆ ಹಾಗೂ ಇನ್ನೊಬ್ಬರು ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ.