ಡಿಸಿಸಿ ಬ್ಯಾಂಕ್ ಕುರಿತು ಖಾಸಗಿ ವಾಹಿನಿ ಸುದ್ದಿ ಅಲ್ಲಗಳೆದ ರಾಜೇಂದ್ರ ಕುಮಾರ್

ಮಂಗಳೂರು : ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರಿ (ಎಸ್ಕೆಡಿಸಿಸಿ) ಬ್ಯಾಂಕ್ ವಿರುದ್ಧ ಕಳೆದ ಎರಡು ದಿನಗಳಿಂದ ಬೆಂಗಳೂರಿನ ಖಾಸಗಿ ಚಾನೆಲ್ಲೊಂದು ಪ್ರಸಾರ ಮಾಡುತ್ತಿದ್ದ ಮಾಹಿತಿ ಸಂಪೂರ್ಣ ಸುಳ್ಳಿಂದ ಕೂಡಿದ ಮಾನಹಾನಿಕರ ಮತ್ತು ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಎಸ್ಕೆಡಿಸಿಸಿ ಬ್ಯಾಂಕ್ ನಬಾರ್ಡ್, ಆರ್ ಬಿ ಐ ಮತ್ತು ಇತರ ಇಲಾಖೆಗಳ ನಿಯಮನುಸಾರ ಕಾರ್ಯನಿರ್ವಹಿಸುತ್ತಿದ್ದು, ಚಾನಲ್ ಸುಳ್ಳು ಮಾಹಿತಿ ಬಿತ್ತಿರಿಸಿ ಪರಿಣಾಮ ಉಭಯ ಜಿಲ್ಲೆಗಳ ಸಹಕಾರ ಕ್ಷೇತ್ರಕ್ಕೆ ಧಕ್ಕೆಯಾಗಿದೆ ಎಂದು ಶನಿವಾರ ನಗರದಲ್ಲಿ ಸರ್ವನಿರ್ದೇಶಕರ ಸಮ್ಮುಖ ಪತ್ರಕರ್ತರೊಂದಿಗೆ ಮಾತನಾಡುತ್ತ ರಾಜೇಂದ್ರ ಕುಮಾರ್ ಸ್ಪಷ್ಟಪಡಿಸಿದರು.

“ಬ್ಯಾಂಕಿನಲ್ಲಿ ಮುನ್ನೂರು ಕೋಟಿ ರೂಪಾಯಿ ಕಳ್ಳ ಠೇವಣಿ ಇದೆ. ಹೆಸರಿಲ್ಲದ ಖಾತೆ ತೆರೆಯಲಾಗಿದೆ. ಮೂರು ದಿವಸದಲ್ಲಿ 600 ಕೋಟಿ ರೂಪಾಯಿ ಛೇವಣಿ ಸಂಗ್ರಹಿಸಲಾಗಿದೆ. ರಾಜಕಾರಣಿಗಳ ಕಪ್ಪು ಹಣ ಇದ್ದು, ಇದೊಂದು ಸ್ವಿಸ್ ಬ್ಯಾಂಕ್ ಆಗಿದೆ” ಇತ್ಯಾದಿಯಾಗಿ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ ಅಧ್ಯಕ್ಷರು, “ನೋಟು ನಿಷೇಧ ಆದ ಮೊದಲ ಐದು ದಿನಗಳ ಅವಧಿಯಲ್ಲಿ ಒಟ್ಟು 1166 ಸಹಕಾರ ಸಂಘಗಳ ಖಾತೆಗಳಿಂದ ಒಟ್ಟು 386.65 ಕೋಟಿ ರೂಪಾಯಿ ಠೇವಣಿ ಮತ್ತು ಸಾಲದ ಖಾತೆಗೆ ಜಮಾ ಆಗಿದೆ. ಜನಧನ ಯೋಜನೆಯಡಿ 1062 ಖಾತೆಗಳಿದ್ದು, ನ 8ರಿಂದ ನ 11ರತನಕ ಕೇವಲ 42 ಮಂದಿ ಮಾತ್ರ ವ್ಯವಹಾರ ನಡೆಸಿದ್ದು ಕೇವಲ 3.72 ಲಕ್ಷ ರೂಪಾಯಿ ಜಮಾ ಆಗಿದೆ. ಸರಕಾರದ ವಿವಿಧ ಸಂಸ್ಥೆಗಳು ಕಾಲ ಕಾಲಕ್ಕೆ ನೀಡಿದ ನಿರ್ದೇಶನಗಳನ್ನು ಪಾಲನೆ ಮಾಡಲಾಗಿದೆ” ಎಂದು ವಿವರಿಸಿದರು.