ಅರ್ನಬ್ ಚಾನೆಲ್ಲಿನಲ್ಲಿ ಹಣ ಹೂಡಿದ ರಾಜೀವ್ ಚಂ, ಮೋಹನದಾಸ್ ಪೈ

ಬೆಂಗಳೂರು : ಟೈಮ್ಸ್ ನೌ ಸುದ್ದಿವಾಹಿನಿಯ ಮುಖ್ಯ ಸಂಪಾದಕ ಹುದ್ದೆಯಿಂದ ಇತ್ತೀಚೆಗೆ ರಾಜೀನಾಮೆ ನೀಡಿ ಹೊರಬಂದಿದ್ದ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ `ರಿಪಬ್ಲಿಕ್’ ಹೊಸ ಮಾಧ್ಯಮ ಸಂಸ್ಥೆಯಲ್ಲಿನ ಹೂಡಿಕೆದಾರರ ಬಗ್ಗೆ ಸಾಕಷ್ಟು ಊಹಾಪೋಹಗಳೆದ್ದಿವೆ. ಮೂಲಗಳಿಂದ ಇದೀಗ ತಿಳಿದುಕೊಂಡಂತೆ ರಾಜ್ಯಸಭಾದ ಎನ್ಡಿಎ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ಮಾಜಿ ಇನ್ಫೋಸಿಸ್ ಅಧಿಕಾರಿ ಮೋಹನದಾಸ್ ಪೈ ಗೋಸ್ವಾಮಿಯ `ರಿಪಬ್ಲಿಕ್’ ಸಂಸ್ಥೆಯಲ್ಲಿ ಹಣ ತೊಡಗಿಸಿದ್ದಾರೆ.
ಕೇರಳದ ಎನ್ಡಿಎ ಘಟಕದ ಉಪಾಧ್ಯಕ್ಷರೂ ಆಗಿರುವ ರಾಜೀವ್ ಚಂದ್ರಶೇಖರ್ ಅವರು ಗೋಸ್ವಾಮಿಯ ಪ್ರಸ್ತಾವಿತ ಸುದ್ದಿ ಸಂಸ್ಥೆಯಲ್ಲಿ ಅತ್ಯಂತ ಹೆಚ್ಚು ಹಣ ಹೂಡಿಕೆ ಮಾಡಿ ಅದರ ನಿರ್ದೇಶಕರಾಗಿದ್ದಾರೆಂದು ವರದಿಯೊಂದು ತಿಳಿಸಿದೆ.
ಅತ್ತ ಮೋಹನದಾಸ್ ಪೈ ಕೂಡ ಬಿಜೆಪಿ ಹಾಗೂ ಅದರ ಹಿಂದುತ್ವ ಸಿದ್ಧಾಂತಗಳ ಬೆಂಬಲಿಗರೆಂದ ಈಗಾಗಲೇ ಅವರ ಹಲವು ಟ್ವೀಟುಗಳಿಂದ ಸ್ಪಷ್ಟವಾಗಿವೆಯಲ್ಲದೆ ಅವರು ಟೈಮ್ಸ್ ನೌ ವಾಹಿನಿಯ ನ್ಯೂಸ್ ಅವರ್ ಡಿಬೇಟ್ ಕಾರ್ಯಕ್ರಮದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು.
ಅರ್ನಬ್ ಮತ್ತವರ ಪತ್ನಿ ಸಮ್ಯಬೃತ ರಾಯ್ ಅವರ ಒಡೆತನದ ಸರ್ಗ್ ಮೀಡಿಯಾ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಕೂಡ ಈ ಹೊಸ ಸಂಸ್ಥೆಯಲ್ಲಿ ರೂ 26 ಕೋಟಿ ಹೂಡಿಕೆ ಮಾಡಿದೆ. ಆರಿನ್ ಕ್ಯಾಪಿಟಲ್ ಸಂಸ್ಥೆಯ ರಂಜನ್ ರಾಮದಾಸ್ ಪೈ ಅವರು ಸರ್ಗ್ ಮೀಡಿಯಾ ಹೋಲ್ಡಿಂಗ್ ಇದರ ಅತ್ಯಂತ ದೊಡ್ಡ ಹೂಡಿಕೆದಾರರಾಗಿದ್ದರೆ (ರೂ 7.5 ಕೋಟಿ) ಅವರು ತಮ್ಮ ಸಂಸ್ಥೆಯನ್ನು ಮೋಹನದಾಸ ಪೈ ಜತೆಗೂಡಿ ಸ್ಥಾಪಿಸಿದ್ದರು ಎಂಬುದು ವಿಶೇಷ.
————–