ರಾಜಸ್ಥಾನ ರೈತರ ದಿಟ್ಟ ಪ್ರತಿಭಟನೆ, ಸರ್ಕಾರದ ದಮನಕಾರಿ ಧೋರಣೆ

ತೀವ್ರ ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ರಾಜಸ್ಥಾನದ ರೈತಾಪಿ ಸಮುದಾಯ ಸೆಪ್ಟಂಬರ್ 1ರಿಂದ ರಾಜ್ಯವ್ಯಾಪಿ ಆಂದೋಲನವನ್ನು ಹಮ್ಮಿಕೊಂಡಿದ್ದು, ಲಕ್ಷಾಂತರ ರೈತರು ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿದ್ದಾರೆ. ಶಾಂತಿಯುತವಾದ ಈ ಪ್ರತಿಭಟನೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಸೆಕ್ಷನ್ 144 ಜಾರಿಗೊಳಿಸಿದೆ. ರೈತರೊಂದಿಗೆ ಕೈಜೋಡಿಸಿದ ಸಾರ್ವಜನಿಕರು ಮತ್ತು ಅಪಾರ ಸಂಖ್ಯೆಯ ಮಹಿಳೆಯರು ರಾಜ್ಯದ ನಗರಗಳಲ್ಲಿ ರಸ್ತೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಮುಖ್ಯಮಂತ್ರಿ ವಸುಂಧರಾರಾಜೇ ಅವರ ಪ್ರತಿಕೃತಿ ದಹನ ಮಾಡಿದ್ದಾರೆ. ಈ ಹೋರಾಟಕ್ಕೆ ವಿದ್ಯಾರ್ಥಿಗಳು, ಮಹಿಳೆಯರು, ಆದಿವಾಸಿಗಳು, ದಲಿತರು ಮತ್ತು ಸಣ್ಣ ವ್ಯಾಪಾರಿಗಳೂ ಬೆಂಬಲ ನೀಡಿದ್ದು ಪ್ರತಿಭಟನೆ ಬೃಹದಾಕಾರ ತಾಳುತ್ತಿದೆ.

ಕನಿಷ್ಟ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಶೇ 50ಕ್ಕಿಂತಲೂ ಹೆಚ್ಚಾಗಿ ನೀಡುವಂತೆ ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿದ್ದು, ಈ ಶಿಫಾರಸನ್ನು ಜಾರಿಗೊಳಿಸಲು ರೈತರು ಆಗ್ರಹಿಸುತ್ತಿದ್ದಾರೆ. ಸಾಲ ಮನ್ನಾ, ಕೃಷಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಉದ್ಯೋಗಾವಕಾಶ, ಬೆಳೆ ವಿಮೆ, ಜಾನುವಾರು ವ್ಯಾಪಾರದ ಹಕ್ಕು ಇವೇ ಮುಂತಾದ ಬೇಡಿಕೆಗಳನ್ನು ಮಂಡಿಸಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ಈ ಹೋರಾಟ ತೀವ್ರತೆ ಪಡೆಯುತ್ತಿದೆ. ಈ ಬೃಹತ್ ಹೋರಾಟ ರಾಜ್ಯದ ಸಾರ್ವಜನಿಕ ಜೀವನವನ್ನು ಸ್ಥಗಿತಗೊಳಿಸಿದ್ದರೂ ಎಚ್ಚೆತ್ತುಕೊಳ್ಳದ ರಾಜಸ್ಥಾನ ಬಿಜೆಪಿ ಸರ್ಕಾರ ನಿಷೇದಾಜ್ಞೆಯ ಮೂಲಕ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.