`ದೇವಳ ದುಡ್ಡು ಖಾಸಗಿ ಶಾಲೆಗೆ ನೀಡಿದ್ದು ಅಕ್ರಮ’

ನಿಯಮಬಾಹಿರವಾಗಿ ಅನುದಾನ ಪಡೆಯುತ್ತಿದ್ದ ಭಟ್ ವಿರುದ್ಧ ರೈ ಪ್ರಹಾರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : “ದೇವಸ್ಥಾನಕ್ಕೆ ಭಕ್ತರು ನೀಡುವ ಹಣದಿಂದ ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ಕ್ರಮ ಎಲ್ಲಿಯೂ ಇಲ್ಲ. ಆದರೆ ಬಿಜೆಪಿ-ಜೆಡಿಎಸ್ ಸರಕಾರದ ಅವಧಿಯಲ್ಲಿ ಚಳ್ಳೆ ಹಣ್ಣು ತಿನ್ನಿಸಿ ಕಲ್ಲಡ್ಕ ಭಟ್ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಕೊಲ್ಲೂರು ದೇವಳದ ಹಣವನ್ನು ಪಡೆದುಕೊಳ್ಳುತ್ತಿದ್ದರು. ಆ ಬಳಿಕವೂ ಅದು ಮುಂದುವರಿದಿದ್ದು, ಸರಕಾರದ ಗಮನಕ್ಕೆ ಇದೀಗ ಇದು ಬಂದಿದ್ದು, ಅನುದಾನ ತಡೆ ಹಿಡಿಯಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದೊಂದು ಸರಕಾರದ ದಿಟ್ಟ ಕ್ರಮ” ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಪತ್ರಿಕೆಗೆ ಪ್ರತಿಕ್ರಯಿಸಿದ್ದಾರೆ.

“ಸರಕಾರ ಈಗಾಗಲೇ ಸರಕಾರಿ, ಅನುದಾನಿತ ಸಹಿತ ಎಲ್ಲಾ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ ಮೊದಲಾದ  ಪೌಷ್ಠಿಕ ಆಹಾರಗಳನ್ನು ವಿತರಿಸುತ್ತಿದ್ದು, ಇದರ ಪ್ರಯೋಜನ ಎಲ್ಲ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಈ ಮಧ್ಯೆ ಕಲ್ಲಡ್ಕ ಭಟ್ ಸಾರಥ್ಯದ ಶಾಲೆಗಳಿಗೆ ನಿಯಮ ಮೀರಿ ವಿಶಿಷ್ಟ ಅನುದಾನ ಪಡೆಯುತ್ತಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳುವ ಮೊದಲೇ ಮಾತಿಮಾತಿಗೂ ಧರ್ಮ-ಸಂಸ್ಕøತಿ ಬಗ್ಗೆ ಮಾತನಾಡುವ ಭಟ್ ವಂಚನೆಯಿಂದ ಪಡೆದುಕೊಳ್ಳುತ್ತಿದ್ದ ಈ ಅನುದಾನವನ್ನು ಹಿಂತಿರುಗಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಇದೀಗ ಸರಕಾರವೇ ಈ ಬಗ್ಗೆ ತಿಳಿದುಕೊಂಡು ಕ್ರಮ ಕೈಗೊಂಡಿದೆ” ಎಂದಿದ್ದಾರೆ.