ರಾಜ್ಯದಲ್ಲೇ ಪ್ರಥಮ ಎರಡು ಮಳೆ ನೀರು ಸಂಗ್ರಹ ಬಾವಿ ಉಡುಪಿಯಲ್ಲಿ ನಿರ್ಮಾಣ

ಸಾಂದರ್ಭಿಕ ಚಿತ್ರ

ಉಡುಪಿ : ಕರ್ನಾಟಕದ ಕರಾವಳಿ ಪ್ರದೇಶದಲ್ಲೇ ಪ್ರಥಮವೆನ್ನಲಾಗಿರುವ ರೀಚಾರ್ಜ್ (ಸಂಗ್ರಹ) ಬಾವಿಗಳು ಉಡುಪಿ ಜಿಲ್ಲೆಯ ಕೋಟೇಶ್ವರದ ವಕವಾಡಿ ಎಂಬಲ್ಲಿರುವ ಶಿಕ್ಷಣ ಸಂಸ್ಥೆಯೊಂದರ ಆವರಣದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಮಳೆ ನೀರು ಕೊಯ್ಲು ಮಾಡಲಾಗುತ್ತದೆ.

ಬಂಡ್ಯ ಎಜ್ಯುಕೇಶನ್ ಟ್ರಸ್ಟ್ ಆಡಳಿತದ ಗುರುಕುಲ ಪಬ್ಲಿಕ್ ಸ್ಕೂಲಿನ ಆವರಣದಲ್ಲಿ ಎರಡು ರೀಚಾರ್ಜ್ ಬಾವಿ ಕೊರೆಯಲಾಗಿದೆ. 40 ಎಕ್ರೆ ಜಾಗ ಹೊಂದಿರುವ ಈ ಶಾಲೆಯಲ್ಲಿ ನಿರ್ಮಿಸಲಾಗಿರುವ ಎರಡು ರೀಚಾರ್ಜು ಬಾವಿಗಳಿಗೆ 20 ಎಕ್ರೆ ಜಾಗದಿಂದ ಮಳೆ ನೀರು ಹರಿದು ಬರಲಿದೆ ಎಂದು ಶಾಲೆಯ ಜಂಟಿ ಆಡಳಿತ ಟ್ರಸ್ಟಿ ಸುಭಾಚ್ಚಂದ್ರ ಶೆಟ್ಟಿ ತಿಳಿಸಿದ್ದಾರೆ.

ಜಿಲ್ಲೆಯ ಜನತೆ ಮಳೆ ನೀರು ಕೊಯ್ಲಿನ ಬಗ್ಗೆ ಹೆಚ್ಚಿನ ಅರಿವು ಬೆಳೆಸಿಕೊಳ್ಳುವ ದೆಸೆಯಲ್ಲಿ ಇಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವರ್ಷದ ಆರಂಭದಲ್ಲಿ ಈಶಾನ್ಯ ಮಾನ್ಸೂನ್ ದುರ್ಬಲವಾದ್ದರಿಂದ ಸರ್ಕಾರ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿತ್ತು. ಆದರೆ ಜಿಲ್ಲೆಯಲ್ಲಿ ಇದಕ್ಕಿಂತ ಹಿಂದೆಯೇ ಅಂತರ್ಜಲ ಸಾಕಷ್ಟು ಕುಸಿದಿತ್ತು.

ಶಾಲಾ ಆವರಣದಲ್ಲಿರುವ ಕಟ್ಟಡಗಳಿಂದ ಒಂದು ಬಾವಿಗೆ ಮಳೆ ನೀರು ಹರಿಯಲು ವ್ಯವಸ್ಥೆ ಮಾಡಲಾಗಿದ್ದರೆ, ಮತ್ತೊಂದಕ್ಕೆ 20 ಎಕ್ರೆ ಜಾಗದ ನೀರು ಹರಿಸಲಾಗುತ್ತದೆ. ರೀಜಾರ್ಚ್ ಬಾವಿಗಳಿಗೆ ಶಾಲೆಯು 80,000 ರೂ ಖರ್ಚು ಹಾಗೂ ಮೂರು ದಿನಗಳ ಅಂತರದಲ್ಲಿ ಬೆಂಗಳೂರಿನ ಸಂಸ್ಥೆಯೊಂದು ನಿರ್ಮಿಸಿದೆ. “ಇದೊಂದು ಉತ್ತಮ ಹಾಗೂ ಜನತೆಯ ಕಣ್ಣು ತೆರೆಸಿದ ಯೋಜನೆ” ಎಂದು ಮಳೆನೀರು ಕೊಯ್ಲು ತಜ್ಞ ಶ್ರೀಪಡ್ರೆ ತಿಳಿಸಿದರು.