ಅವಾಂತರ ಸೃಷ್ಟಿಸಿದ ಭಾರೀ ಮಳೆ

ಕೆಲವೆಡೆ ಜನಜೀವನ ಅಸ್ತವ್ಯಸ್ತ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸುರಿದ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ.ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ನಗರದ ಕೆ ಎಸ್ ರಾವ್ ರಸ್ತೆಯ ಸಿಟಿ ಸೆಂಟರ್ ಬಳಿಯ ಅಪಾರ್ಟಮೆಂಟ್ ತಡೆಗೋಡೆ ಕುಸಿದು ಇನ್ನೊಂದು ಅಪಾರ್ಟಮೆಂಟ್ ಕೆಳಗಡೆ ಪಾರ್ಕ್ ಮಾಡಿದ್ದ ಕಾರುಗಳ ಮೇಲೆ ಬಿದ್ದು ಹಾನಿ ಉಂಟಾಗಿದೆ. ಎರಡು ಕಾರುಗಳ ಮುಂಭಾಗವು ಸಂಪೂರ್ಣ ನುಜ್ಜುಗುಜ್ಜಾಗಿದೆ. ಮೇಲ್ಭಾಗದಿಂದ ಸುರಿದ ಮಳೆ ನೀರು ತಡೆಗೋಡೆಯೊಳಗೆ ಸೇರಿ ಇಡೀ ತಡೆಗೋಡೆ ಕುಸಿದು ಬಿದ್ದಿದೆ.

ಕೊಡಿಯಾಲಬೈಲ್, ಬಿಜೈ, ಅತ್ತಾವರ, ಎಕ್ಕೂರು, ಪಡೀಲ್ ಮೊದಲಾದ ಕಡೆಗಳಲ್ಲಿನ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತಗೊಂಡಿದ್ದವು. ಇಲ್ಲೆಲ್ಲಾ ಕೃತಕ ನೆರೆ ಸೃಷ್ಟಿಯಾಗಿದೆ. ಜಲಾವೃತ್ತಗೊಂಡ ಅತ್ತಾವರ ಕೆಎಂಸಿ ಹಿಂಭಾಗದಲ್ಲಿರುವ ಪ್ರದೇಶಕ್ಕೆ ಶಾಸಕ ಜೆ ಆರ್ ಲೋಬೊ ಪಾಲಿಕೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಪಾಲಿಕೆ ಅಧಿಕಾರಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸೂಚಿಸಿದರು.

ಫಳ್ನೀರಿನಲ್ಲಿರುವ ಹೀ ಮನ್ ಜವುಳಿ ಶಾಪಿನೊಳಗೂ ನೀರು ನುಗ್ಗಿ ಲಕ್ಷಾಂತರ ರೂ ಹಾನಿ ಉಂಟಾಗಿದೆ. ಅಂಗಡಿ ಮುಂಭಾಗದಲ್ಲಿರುವ ಚರಂಡಿ ಬ್ಲಾಕ್ ಆಗಿದ್ದು, ಶಾಪಿನೊಳಗೆ ನೀರು ನುಗ್ಗಲು ಕಾರಣ ಎಂದು ತಿಳಿದುಬಂದಿದೆ.ನಗರದ ಹೊರವಲಯದ ಯೆಯ್ಯಾಡಿ ಬಳಿ ಮನೆಯೊಂದು ಭಾಗಶಃ ಕುಸಿದಿದೆ. ಭಾರೀ ಮಳೆಯಿಂದಾಗಿ ಇಲ್ಲಿನ ಬಲ್ಲಾಳ್ ಗ್ಯಾರೇಜ್ ಹಿಂಭಾಗದಲ್ಲಿರುವ ಮನೆ ಕುಸಿದಿದೆ. ಆದರೆ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಟ್ರಾಫಿಕ್ ಜಾಂ ಇನ್ನು ಮುಂಜಾನೆಯಿಂದಲೇ ಸುರಿದ ಭಾರೀ ಮಳೆಯಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು.ಜನನಿಬಿಡ ಪ್ರದೇಶಗಳಾದ ಹಂಪನಕಟ್ಟೆ, ನವಭಾರತ್ ಸರ್ಕಲ್, ವಿಪಿಎಸ್ ವೃತ್ತ, ಪಂಪ್ವೆಲ್, ನಂತೂರುಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಸಪಟ್ಟರು.

ಡೀಸಿ ಮುನ್ನೆಚ್ಚರಿಕೆ ಸೂಚನೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಸೂಚಿಸಿರುವ ಹಿನ್ನೆಲೆಯಲ್ಲಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಿ ಅಧಿಕಾರಿಗಳು ಕೆಲಸ ನಿರ್ವಹಿಸುವಂತೆ ದ ಕ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ.

ಎಲ್ಲಾ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು ಕೇಂದ್ರ ಸ್ಥಾನದಲ್ಲಿರಬೇಕು, ಮುಂಜಾಗೃತಾ ಕ್ರಮ ಕೈಗೊಳ್ಳಬೇಕು, ತಗ್ಗು ಪ್ರದೇಶದಲ್ಲಿ ನೀರು ನಿಂತರೆ ಸ್ಥಳೀಯರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು, ಭಾರೀ ಗಾಳೀ ಮಳೆಗೆ ಮರಗಳು ಬಿದ್ದಾಗ ಅವುಗಳನ್ನು ಕೂಡಲೇ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.

ಅಲ್ಲದೆ ಜೋರು ಮಳೆ ಬಂದಲ್ಲಿ ಉಂಟಾಗುವ ಸಮಸ್ಯೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ರಜೆ ನೀಡುವ ನಿಟ್ಟಿನಲ್ಲಿ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.