ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ದಾಳಿ : 30 ಶೆಡ್ಡುಗಳು ನೆಲಸಮ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜಿಲ್ಲಾಡಳಿತದ ಸೂಚನೆಯನ್ನು ಧಿಕ್ಕರಿಸಿ ಅಡ್ಡೂರು, ನೂಯಿ, ಅಳಕೆ ಮಡಿ ಸೇರಿದಂತೆ ಇಲ್ಲಿನ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ನಿನ್ನೆ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಅಲ್ಲದೆ ಇಲ್ಲಿನ ಅಕ್ರಮ ಮರಳು ಶೆಡ್ಡುಗಳನ್ನು ನೆಲಸಮಗೊಳಿಸಿ, 100ಕ್ಕೂ ಅಧಿಕ ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅನ್ಯರಾಜ್ಯದ ಕಾರ್ಮಿಕರನ್ನು ತೆರವುಗೊಳಿಸಿದ್ದಾರೆ.

ಈ ಹಿಂದೆ ಐದು ಪ್ರಕರಣಗಳು ದಾಖಲಾಗಿದ್ದರೂ ಕೂಡಾ ಇಲ್ಲಿ ಎಗ್ಗಿಲ್ಲದೇ ನಿರಂತರವಾಗಿ ಮರಳುಗಾರಿಕೆ ನಡೆಯುತ್ತಲೇ ಇತ್ತು. 5 ಲಾರಿ, ಜೆಸಿಬಿ ಮತ್ತು ಮರಳುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೂ ಇಲ್ಲಿನ ಅಕ್ರಮ ಚಟುವಟಿಕೆ ಮುಂದುವರಿದಿತ್ತು. ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ, ಜಿಲ್ಲಾಡಳಿತ ಸೂಚನೆಯನ್ನು ಧಿಕ್ಕರಿಸಿ ಮರಳುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಇದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ನಿನ್ನೆ ತಹಶೀಲ್ದಾರ್, ರೆವೆನ್ಯೂ ವಿಭಾಗದ ಅಧಿಕಾರಿಗಳು, ಬಜಪೆ ಪೊಲೀಸರು, ಪಿಡಬ್ಲ್ಯೂಡಿ ಅಧಿಕಾರಿಗಳು, ಗಣಿ ಇಲಾಖೆ ಅಧಿಕಾರಿಗಳು, ಪಿಡಿಒಗಳು ಹೀಗೆ ಏಕಕಾಲದಲ್ಲಿ 4 ಕಡೆಗಳಿಗೆ ಏಕಾಏಕಿ ದಾಳಿ ನಡೆಸಿ 30ಕ್ಕೂ ಅಧಿಕ ಅಕ್ರಮ ಶೆಡ್ಡುಗಳನ್ನು ನೆಲಸಮ ಮಾಡಿದ್ದಾರೆ.

ಇಲ್ಲಿ ಮರಳುಗಾರಿಕೆ ಕೆಲಸ ಮಾಡಲೆಂದು ಉತ್ತರ ಪ್ರದೇಶದಿಂದ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬರಲಾಗಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.