ಗುಡ್ಡ ಅಗೆದು ಕನಿಷ್ಠ ಇಲಿ ಹಿಡಿಯಲಾಗದ ಮೋದಿ

ಕೇಂದ್ರ ಸರಕಾರದ ವೈಫಲ್ಯ

ವಿರುದ್ಧ ಸಚಿವ ರೈ ವಾಗ್ದಾಳಿ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : “ಗುಡ್ಡ ಅಗೆದು ಕನಿಷ್ಠ ಇಲಿಯನ್ನೂ ಹಿಡಿಯಲಾಗದ ಅತ್ಯಂತ ಶೋಚನೀಯ ಪರಿಸ್ಥಿತಿ ಕೇಂದ್ರದ ನರೇಂದ್ರ ಮೋದಿ ಸರಕಾರದ್ದು. ಕಪ್ಪು ಹಣ ವಾಪಾಸ್, ಭ್ರಷ್ಟಾಚಾರ ನಿಗ್ರಹ, ಭಯೋತ್ಪಾದನೆ ನಿಗ್ರಹ ಮೊದಲಾದ ಬಣ್ಣದ ಮಾತುಗಳನ್ನು ನೋಟ್ ಬ್ಯಾನ್ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕಾರಣಗಳಾದರೂ ಅಂತಿಮವಾಗಿ ಏನನ್ನೂ ಸಾಧಿಸಲಾಗದೆ ನೋಟ್ ಬ್ಯಾನ್ ನೀರಸ ಕ್ರಿಯೆ ಎಂದು ಒಪ್ಪಿಕೊಳ್ಳುವ ಮೂಲಕ ಜಗತ್ತಿನ ಅತ್ಯಂತ ದೊಡ್ಡ ವ್ಯಂಗ್ಯ ಸರಕಾರವಾಗಿ ಮೂಡಿಬಂದಿದೆ”ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ವ್ಯಂಗ್ಯವಾಡಿದರು.

ಬಂಟ್ವಾಳ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ಮಂಗಳವಾರ ಬಿ ಸಿ ರೋಡು ಜಂಕ್ಷನ್ನಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರಕಾರ ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಸಾಮಾನ್ಯ ಜನರನ್ನು ಬ್ಯಾಂಕ್ ಬಾಗಿಲಿಗೆ ಕರೆ ತಂದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ನೋಟ್ ಬ್ಯಾನ್ ಮೂಲಕ ಜನಸಾಮಾನ್ಯರನ್ನು ಬ್ಯಾಂಕ್ ಬಾಗಿಲಿನಿಂದ ಒದ್ದೋಡಿಸಿದರು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, “ಕಾಂಗ್ರೆಸಿನಿಂದ ಮಾತ್ರ ಈ ದೇಶಕ್ಕೆ ಸುಭಿಕ್ಷೆಯ ಆಡಳಿತ ನೀಡಲು ಸಾಧ್ಯ. ಈ ಹಿಂದಿನ ಕಾಂಗ್ರೆಸ್ ಸರಕಾರ ಹಾಗೂ ಈಗಿನ ಬಿಜೆಪಿ ಸರಕಾರದ ನಡುವೆ ಹೋಲಿಕೆ ಮಾಡಿದರೆ ಕಾಂಗ್ರೆಸ್-ಬಿಜೆಪಿ ನಡುವೆ ಇರುವ ವ್ಯತ್ಯಾಸ ಜನತೆಗೆ ಸ್ಪಷ್ಟವಾಗುತ್ತಿದೆ. ಸುಳ್ಳುಗಳ ಸರಮಾಲೆ ಹಾಗೂ ಅಪಪ್ರಚಾರಗಳ ಮೂಲಕ ನಾಡನ್ನು ಕಟ್ಟುವ ಕನಸು ಕಾಣುತ್ತಿರುವ ಬಿಜೆಪಿಗರ ಎಲ್ಲ ಅಜೆಂಡಾಗಳನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡಿದ್ದಾರೆ” ಎಂದರು.ಜಿ ಪಂ ಸದಸ್ಯ ಎಂ ಎಸ್ ಮುಹಮ್ಮದ್ ಮಾತನಾಡಿ, “ಪೊಲೀಸ್ ಇಲಾಖೆಯ ಮಾನ-ಮರ್ಯಾದೆ ತೆಗೆಯುವ ಸಂಸದ ನಳಿನ್ ಕುಮಾರರಂತಹ ನಾಲಾಯಕ್ ಬಿಜೆಪಿಗರಿಗೆ ಪೊಲೀಸ್ ಅಧಿಕಾರಿಗಳು ಹೆದರುವ ಅಗತ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಜೈಲಿಗೆ ಹೋಗಿಲ್ಲ, ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿಲ್ಲ, ಭ್ರಷ್ಟಾಚಾರ ನಡೆಸಿಲ್ಲ, ಸ್ವಜನ ಪಕ್ಷಪಾತ ನಡೆಸಿಲ್ಲ. ಹೀಗಿರುವಾಗ ಮೇಲಿನ ಎಲ್ಲಾ ಕೃತ್ಯಗಳಲ್ಲಿ ಭಾಗಿಯಾಗಿರುವ ಬಿಜೆಪಿಗರು ಅದ್ಯಾವ ಮುಖದಲ್ಲಿ ಸಚಿವರ ರಾಜೀನಾಮೆ ಕೇಳುತ್ತಿದ್ದಾರೆ” ಎಂದು ಪ್ರಶ್ನಿಸಿದರು.