ನಮೋ ಎಂದರೆ ನಂಬಿಕೆಗೆ ಮೋಸ

ಕೇಂದ್ರ ಸರ್ಕಾರದ ವಿರುದ್ಧ ರೈ ವಾಗ್ದಾಳಿ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಇದ್ದಾಗ ಸುಮಾರು 72 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಮೋದಿ ಅವರು ಬಂಡವಾಳಶಾಹಿ, ರಿಲಾಯನ್ಸ್, ಅದಾನಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ದೊಡ್ಡ ಮೊತ್ತದ ಸಾಲ ಮನ್ನಾ ಮಾಡುವ ಮೂಲಕ ಶ್ರೀಮಂತರನ್ನು ಪುನರುತ್ಥಾನ ಮಾಡುತ್ತಿದ್ದಾರೆಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕ, ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿ ಸಿ ರೋಡ್ ಜಂಕ್ಷನ್ನಿನಲ್ಲಿ ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರೈತರ ಸಾಲ ಮನ್ನಾ, ಕೃಷಿ ಉಪಕರಣ ನೀಡಿಕೆ, ಬೆಂಬಲ ಬೆಲೆ ಹಾಗೂ ಉಚಿತ ಪಂಪ್ ಸೆಟ್ ನೀಡುವ ಮೂಲಕ ರೈತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದೆ. ಇದರಿಂದ ರಾಜ್ಯದಲ್ಲಿ ರೈತರು ನೆಮ್ಮದಿಯ ಹಾಗೂ ಸ್ವಾಭಿಮಾನದ ಬದುಕು ರೂಪಿಸುವಂತಾಗಿದೆ” ಎಂದರು.

“ಕೇಂದ್ರದಲ್ಲಿರುವ ನಮೋ ಸರಕಾರ ಎಂದರೆ ನಂಬಿಕೆಗೆ ಮೋಸ ಮಾಡುವ ಸರಕಾರ. ಕೇವಲ ಸುಳ್ಳನ್ನೇ ಬಂಡವಾಳವಾಗಿಸಿಕೊಂಡಿರುವ ಮೋದಿ ಅವರು ಮಾತಿನಲ್ಲೇ ಗೋಪುರ ಕಟ್ಟುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಕಲ್ಲಡ್ಕ ಭಟ್ ವಿರುದ್ಧ ಹರಿಹಾಯ್ದ ರೈರಾಜ್ಯ ಸರಕಾರ ಕಲ್ಲಡ್ಕ ಶಾಲೆಯ ಮಕ್ಕಳ ಬಿಸಿಯೂಟವನ್ನು ಕಿತ್ತುಕೊಂಡಿದೆ ಎಂದು ಅಪಪ್ರಚಾರ ಮಾಡುವ ಬಿಜೆಪಿಗರು ತಾಕತ್ತಿದ್ದರೆ ಆ ಶಾಲೆಯ ಶಿಕ್ಷಕರಿಗೆ ಸರಕಾರ ನೀಡುತ್ತಿರುವ ಸಂಬಳವನ್ನು ನಿರಾಕರಿಸಲಿ ಎಂದು ಸವಾಲೆಸೆದ ಸಚಿವ ರೈ ಮಕ್ಕಳ ಕೈಯಲ್ಲಿ ತಟ್ಟೆ ಕೊಟ್ಟು ಭಿಕ್ಷೆ ಬೇಡಿಸುವ ಬದಲು ಖುದ್ದಾಗಿ ಅವರೆ ಬಂದು ಭಿಕ್ಷೆ ಬೇಡಲಿ. ಭಿಕ್ಷೆ ಬೇಡಲು ಇದು ಅವರಿಗೆ ಸರಿಯಾದ ಸಮಯ ಎಂದು ಪ್ರಭಾಕರ್ ಭಟ್ ವಿರುದ್ಧ ತೀವ್ರ ಹರಿಹಾಯ್ದರು.