ಎಸ್ಪಿ ಅಣ್ಣಾಮಲೈ ದಕ್ಷಿಣಕನ್ನಡಕ್ಕೆ ವರ್ಗಾಯಿಸಲು ರೈ ಶಿಫಾರಸು ?

ಕಲ್ಲಡ್ಕ ಘಟನೆ ಎಫೆಕ್ಟ್ 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇತ್ತೀಚೆಗೆ ನಡೆದ ಕೆಲ ಅಹಿತಕರ ಘಟನೆಗಳು ಮತೀಯ ಬಣ್ಣಕ್ಕೆ ತಿರುಗಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ನೆಲೆಯೂರಿದ್ದ ಉದ್ವಿಗ್ನತೆ ಮಾಯವಾಗಿ ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಜಿಲ್ಲೆಯ ಆಡಳಿತ ಪಕ್ಷದ ನಾಯಕರು ಮಾತ್ರ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಬದಲಾವಣೆಯನ್ನು ಬಯಸುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಿದೆ.

ಮೂಲಗಳ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಸದ್ಯ ಚಿಕ್ಕಮಗಳೂರು ಎಸ್ಪಿ ಆಗಿರುವ ಅಣ್ಣಾಮಲೈರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸುವಂತೆ ಶಿಫಾರಸು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ರೈ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರಲ್ಲೂ  ಮಾತನಾಡಿದ್ದಾರೆನ್ನಲಾಗಿದೆ.

ಘಟನೆ ಸಂಬಂಧ ಹಿಂದೂ ಸಂಘಟನೆಗಳ ನಾಯಕರನ್ನು ಜಾಮೀನುರಹಿತ ಸೆಕ್ಷನ್ನುಗಳಡಿಯಲ್ಲಿ ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಎಸ್ಪಿಗೆ ನಿರ್ದೇಶನ ನೀಡಿದ ಸಂಭಾಷಣೆಯ ವೀಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಲ್ಲಡ್ಕ ಘಟನೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ನಿಭಾಯಿಸಿದ ರೀತಿಯಿಂದ ರಾಜ್ಯ ಸರಕಾರ ಸಂತುಷ್ಟವಾಗಿಲ್ಲವೆಂದು ತಿಳಿದುಬಂದಿದೆ.