ಕಲ್ಲಡ್ಕ ಭಟ್ ಬಂಧಿಸಲು ಎಸ್ಪಿಗೆ ರೈ ಆದೇಶ

`ಆರೆಸ್ಸೆಸ್ ಮುಖಂಡ ರಾಮಮಂದಿರದ ಹೆಸರಿನಲ್ಲಿ ಕೋಟಿ ಕಮಾಯಿ ಮಾಡಿದ್ದಾನೆ’

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಕಲ್ಲಡ್ಕ ಕೋಮು ಘರ್ಷಣೆ ಭುಗಿಲೇಳಲು ಪೊಲೀಸ್ ವೈಫಲ್ಯವೇ ಮುಖ್ಯ ಕಾರಣ ಎಂದು ಮನಗಂಡಿರುವ ಸಚಿವ ರಮಾನಾಥ ರೈ ಜಿಲ್ಲಾ ಎಸ್ಪಿ ಮೇಲೆ ತೀವ್ರ ರೇಗಾಟ ನಡೆಸಿದ್ದಾರೆ.

ಬಂಟ್ವಾಳ ನಿರೀಕ್ಷಣಾ ಮಂದಿರಕ್ಕೆ ಎಸ್ಪಿ ಭೂಷಣ್ ಜಿ ಬೊರಸೆ ಅವರನ್ನು ಕರೆಸಿದ ಸಚಿವ ರೈ ಅವರು, “ಕಲ್ಲಡ್ಕ ಪ್ರಭಾಕರ ಭಟ್ ಕೋಮು ಪ್ರಚೋದನೆ ಭಾಷಣ ಮಾಡಿದರೆ ತಕ್ಷಣ 307 ಕೇಸ್ ಹಾಕಿ 24 ಗಂಟೆಯೊಳಗೆ ಬಂಧಿಸಿ. ಏನೂ ಆಗುವುದಿಲ್ಲ. ಪ್ರಭಾಕರ್ ಭಟ್ ಯಾವುದೇ ಧರ್ಮದ ಪ್ರತಿನಿಧಿಯಲ್ಲ. ಅವನೊಬ್ಬ ಪಕ್ಕಾ ಬಿಸ್ನೆಸ್ ಮ್ಯಾನ್ ಮಾತ್ರ. ಕಲ್ಲಡ್ಕದಲ್ಲಿ ರಾಮಮಂದಿರದ ಹೆಸರಿನಲ್ಲಿ ಕೋಟಿ ಕೋಟಿ ರೂ ಕಮಾಯಿ ಮಾಡಿದವನಾಗಿದ್ದಾನೆ. ರಾಮಂದಿರದ ಬದಲಾಗಿ ಅದು ಕಮರ್ಷಿಯಲ್ ಕಾಂಪ್ಲೆಕ್ಸ್ ಆಗಿ ಬದಲಾಗಿದೆ” ಎಂದೆಲ್ಲಾ ವಾಚಾಮಗೋಚರ ಏಕವಚನದಲ್ಲೇ ಸಚಿವ ರೈ ಪ್ರಭಾಕರ್ ಭಟ್ ವಿರುದ್ದ ಎಸ್ಪಿ ಮುಂದೆ ಹರಿಯಾಯ್ದಿದ್ದಾರೆ.

ಸಚಿವ ರೈ ಎಸ್ಪಿ ಮುಂದೆ ಕೆಂಡಾಮಂಡಲರಾದ ವೀಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಪರ-ವಿರೋಧ ವ್ಯಕ್ತವಾಗುತ್ತಿದೆ. ಕಲ್ಲಡ್ಕ ಗಲಭೆಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿಯೊಂದಿಗೆ ತೀವ್ರ ಗರಂ ಆಗಿ ಮಾತನಾಡಿದ ಸಚಿವ ರೈ, ಕರೋಪಾಡಿ ಗ್ರಾ  ಪಂ ಉಪಾಧ್ಯಕ್ಷನನ್ನು ಪಂಚಾಯತ್ ಕಚೇರಿಗೆ ನುಗ್ಗಿ ಕೊಲೆ ಮಾಡಿರುವ ದುಷ್ಕರ್ಮಿಗಳೂ ಕೂಡಾ ಸಂಘ ಪರಿವಾರದ ಕಾರ್ಯಕರ್ತರಾಗಿದ್ದು, ಇವರಿಗೂ ಕಲ್ಲಡ್ಕ ಪ್ರಭಾಕರ ಭಟ್‍ಗೂ ನಂಟು ಇದೆ ಎಂದು ಸಚಿವ ರೈ ಎಸ್ಪಿಗೆ ಸೂಚಿಸಿದರು.      ಕಲ್ಲಡ್ಕ ಚೂರಿ ಇರಿತ ಪ್ರಕರಣದ ತನಿಖೆಯನ್ನು ಸ್ವತಃ ಜಿಲ್ಲಾ   ಎಸ್ಪಿಯೇ ಕೈಗೆತ್ತಿಕೊಂಡಿದ್ದರಾದರೂ

ಇದುವರೆಗೂ ಪ್ರಮುಖ ಆರೋಪಿ ಕ್ರಿಮಿನಲ್ ಹಿನ್ನಲೆಯ ಮಿಥುನ್ ಪೂಜಾರಿಯನ್ನು ಬಂಧಿಸಲು ಸಾಧ್ಯವಾಗದೆ  ಇರುವುದು ಪೊಲೀಸ್ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂಬುದನ್ನೇ ಬೊಟ್ಟು ಮಾಡಿರುವ ಸಚಿವ ರೈ, ಎಲ್ಲ ಕಾರಣದಿಂದಲೂ ಕಲ್ಲಡ್ಕ ಘಟನೆಗೆ ಸಂಬಂಧಿಸಿ ಜಿಲ್ಲಾ ಎಸ್ಪಿ ಅವರೇ ತಲೆದಂಡ ನೀಡಬೇಕಾದ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ. ಯಾವುದೇ ಕ್ಷಣ ಜಿಲ್ಲಾ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.