ಅಚ್ಚರಿ ಮೂಡಿಸಿದ ರೈ-ಮಲ್ಲಿ ಸಮಾಗಮ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : sಚಿವ ಬಿ ರಮಾನಾಥ ರೈ ಹಾಗೂ ರಾಜ್ಯ ಇಂಟಕ್ ಅಧ್ಯಕ್ಷ ಬಿ ರಾಕೇಶ್ ಮಲ್ಲಿ ನಗರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ  ಆತ್ಮೀಯವಾಗಿ ಒಟ್ಟು ಸೇರಿದ ದೃಶ್ಯ ಭಾನುವಾರ ಕಂಡು ಬಂತು.

ಕಳೆದ ಹಲವು ವರ್ಷಗಳಿಂದ ಈ ಇಬ್ಬರು ಬಂಟ ಸಮುದಾಯದ ಪ್ರಮುಖರು ಪರಸ್ಪರ ಮುನಿಸಿಕೊಂಡೇ ಇದ್ದರು. ಪಕ್ಷದ ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಅಥವಾ ಒಂದೇ ವೇದಿಕೆಯಲ್ಲಿ ಕಂಡು ಬರುತ್ತಿರಲಿಲ್ಲ. ಭಾನುವಾರ ನಗರದ ಕಾರ್ಯಕ್ರಮವೊಂದರಲ್ಲಿ ಹಠಾತ್ ಆಗಿ ರಮಾನಾಥ ರೈ ಹಾಗೂ ರಾಕೇಶ್ ಮಲ್ಲಿ ಒಟ್ಟೊಟ್ಟಿಗೆ ಹೆಜ್ಜೆ ಹಾಕಿದರಲ್ಲದೆ ಪರಸ್ಪರ ಕುಳಿತು ಕುಶಲೋಪರಿ ಮಾತನಾಡಿ ನಗೆಗಡಲಲ್ಲಿ ತೇಲಾಡಿದ ದೃಶ್ಯ ಹಲವರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿ ಕ್ಷಣ ಮಾತ್ರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನ ಸಂಚಾರ ಕಂಡಿತು.

ಇನ್ನೇನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆಯಲಿರುವುದರಿಂದ ಈ ಇಬ್ಬರು ಬಂಟ ನಾಯಕರ ಸಮ್ಮಿಲನ ಕಾಂಗ್ರೆಸ್ ಪಡಸಾಲೆಯಲ್ಲಿ ಹೊಸತೊಂದು ಸಂಚಲನಕ್ಕೆ ಕಾರಣವಾಯಿತು. ಈ ಹಿಂದಿನ ಚುನಾವಣೆಗಳಲ್ಲಿ ಇಬ್ಬರು ಕಾಂಗ್ರೆಸ್ ಪರವಾಗಿ ಕಾರ್ಯನಿರ್ವಹಿಸಿದ್ದರೂ ಯಾವುದೇ ಕಾರಣಕ್ಕೂ ಎಲ್ಲಿಯೂ ಒಟ್ಟು ಸೇರದೆ ಪ್ರತ್ಯೇಕ ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರಾಕೇಶ್ ಮಲ್ಲಿ ಸಚಿವ ರಮಾನಾಥ ರೈ ಅವರ ವಿರುದ್ದ ಮುನಿಸಿಕೊಂಡಿದ್ದರಿಂದ ಸಹಜವಾಗಿ ಅವರ ನಡೆಯ ಬಗ್ಗೆ ಕೈ ಕಾರ್ಯಕರ್ತರಲ್ಲಿ ಸಂಶಯವನ್ನೂ ಮೂಡಿಸಿತ್ತು ಎಂಬುದು ಸುಳ್ಳಲ್ಲ.