ಎತ್ತಿನಹೊಳೆ ಸಭೆಯಲ್ಲಿ ರೈ, ಡಿಸೋಜಾ ಬೇಜವಾಬ್ದಾರಿ

ರಮಾನಾಥ ರೈ, ಐವನ್ ಡಿಸೋಜಾ, ವಿಜಯಕುಮಾರ್ ಶೆಟ್ಟಿ

ವಿಜಯಕುಮಾರ್ ಶೆಟ್ಟಿ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೇತ್ರಾವತಿ ನದಿ ತಿರುವು ಯೋಜನೆ ಕುರಿತಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲೆಂದು ಕರೆದಿದ್ದ ನಮ್ಮನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಅವಮಾನಿಸಿದ್ದಾರೆ. ಅವರ ಬೇಜವಾಬ್ದಾರಿ ಹೇಳಿಕೆಗಳು, ಅವರ ನಡತೆ ನಮಗೆ ಆಘಾತ ತಂದಿದೆ ಎಂದು ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಒಬ್ಬ ಜವಾಬ್ದಾರಿಯುತ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರತಿಧ್ವನಿಸಿ ಮಾತನಾಡಬೇಕಾಗಿತ್ತು. ನಮ್ಮ ಕೂಗಿಗೆ ಅವರು ದನಿಯಾಗಬೇಕಾಗಿತ್ತು. ಆರು ಬಾರಿ ನಾನು ಆಯ್ಕೆಯಾಗಿದ್ದೇನೆ ಎಂದು ಹೇಳುವ ರಮಾನಾಥ ರೈ, ಹೋರಾಟಗಾರರನ್ನು ಏಕವಚನದಿಂದ ನಿಂದಿಸಿದ್ದಾರೆ. ಅಲ್ಲದೆ ಎಂ ಎಲ್ ಸಿ ಐವನ್ ಡಿಸೋಜಾ ಕೂಡಾ ಹೋರಾಟಗಾರರನ್ನು ಬೆಂಬಲಿಸದೇ ಬೇಜವಾಬ್ದಾರಿಯಿಂದ ನಡೆದುಕೊಂಡರು. ನಾವು ಅವರಿಂದ ಇಂತಹ ಬೇಜವಾಬ್ದಾರಿ ನಡೆಯನ್ನು ನಿರೀಕ್ಷಿಸಿರಲಿಲ್ಲ” ಎಂದರು.

ಇಡೀ ಸಭೆಯನ್ನು ರಮಾನಾಥ ರೈ ಗೊಂದಲದ ಗೂಡನ್ನಾಗಿಸಿದರು ಮತ್ತು ರಾಜಕೀಯ ಮಾಡಿದರು ಎಂದು ಶೆಟ್ಟಿ ಆರೋಪಿಸಿದರು.

“ರಮಾನಾಥ ರೈ, ಐವನ್ ಡಿಸೋಜ, ಯು ಟಿ ಖಾದರ್, ಮೊಯ್ದೀನ್ ಬಾವ ಇವರೆಲ್ಲರೂ ಕೋಲಾರದ ಜನಪ್ರತಿನಿಧಿಯಾಗಿ ಸಭೆಯಲ್ಲಿ ಪಾಲ್ಗೊಂಡರು” ಎಂದು ಇನ್ನೊಬ್ಬ ಹೋರಾಟಗಾರ ದಿನೇಶ್ ಹೊಳ್ಳ ನುಡಿದರು.