ಪಾದಯಾತ್ರೆ ಮಾಡಬೇಡಿ ಎಂದು ಗೃಹ ಸಚಿವ ಹೇಳಿಲ್ಲ : ಸಚಿವ ರೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಿಂದ ಮಾಣಿಯವರೆಗೆ ಸೆಪ್ಟೆಂಬರ್ 12ರಂದು ನಡೆಸಲು ಉದ್ದೇಶಿಸಿದ್ದ ಶಾಂತಿಗಾಗಿ ಪಾದಯಾತ್ರೆ ಮುಂದೂಡುವಂತೆ ಗೃಹ ಸಚಿವ ರಾಮಲಿಂಗ ರೆಡ್ಡಿ ಸೂಚಿಸಿದ್ದಾರೆಯೇ ಹೊರತು ಪಾದಯಾತ್ರೆ ಮಾಡಬಾರದೆಂದು ಎಲ್ಲೂ ಹೇಳಿಲ್ಲ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರಂತೆ ನಾವು ಕಾನೂನು ಸುವ್ಯವಸ್ಥೆಗೆ ಎಂದಿಗೂ ಭಂಗ ತರುವುದಿಲ್ಲ. ಕಾಂಗ್ರೆಸ್ ಪಕ್ಷ ಕಾನೂನು ಕೈಗೆತ್ತಿಕೊಳ್ಳಲು ಯಾವತ್ತೂ ಅವಕಾಶ ನೀಡುವುದಿಲ್ಲ. ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರು ಪಾದಯಾತ್ರೆಯನ್ನು ಮುಂದೂಡುವಂತೆ ಮಾತ್ರ ಸೂಚಿಸಿದ್ದಾರೆ. ಪಾದಯಾತ್ರೆಯ ಮುಂದಿನ ದಿನಾಂಕವನ್ನು ನಾವು ಶೀಘ್ರವೇ ಪ್ರಕಟಿಸುತ್ತೇವೆ” ಎಂದು ಸಚಿವರು ಹೇಳಿದರು.

ಮತೀಯ ಸಂಘಟನೆಗಳನ್ನು ಹೊರಗಿಟ್ಟು ಶಾಂತಿಗಾಗಿ ಪಾದಯಾತ್ರೆ ಮಾಡುವುದಾಗಿ ಸಚಿವ ರೈ ಸುದ್ದಿಗೋಷ್ಠಿಯಲ್ಲಿ ಈ ಹಿಂದೆ ಘೋಷಣೆ ಮಾಡಿದ್ದರು.