ಹಜ್ ಅನುದಾನ ಹಿಂಪಡೆಯಲು ಉಸ್ತುವಾರಿ ಸಚಿವ ರೈ ವಿರೋಧ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹಜ್ ಪಾಲಿಸಿ ಪ್ರಸ್ತಾವಿಸಿರುವ ಯಾತ್ರಿಕರಿಗೆ ಸರ್ಕಾರಿ ಸಹಾಯಧನ ರದ್ಧತಿ ಎಂಬ ಶಿಫಾರಸ್ಸಿನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ನಾಯಕರು ಅಥವಾ ಇತರೆ ಯಾರೂ ಕೂಡ ಇದುವರೆಗೆ ಧ್ವನಿ ಎತ್ತಿಲ್ಲ.

ಲಭ್ಯವಿರುವ ಸಹಾಯಧನವು ಇಸ್ಲಾಂ ಧರ್ಮ ನಿಯಮದ ಪ್ರಕಾರ ಸ್ವೀಕಾರಾರ್ಹವಲ್ಲ ಎಂಬ ಕಾರಣದಿಂದ ಮುಸ್ಲಿಮರು ಅದರಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರೂ ಇದುವರೆಗೆ ಪ್ರಸ್ತಾವಿತ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಹಜ್ ಪಾಲಿಸಿ 2018-22 ಶಿಫಾರಸ್ಸನ್ನು ಅಫ್ಜಲ್ ಅಮಾನುಲ್ಲಾ ಮುಖಂಡತ್ವದ ಪೀಠವು ಹೊರಡಿಸಿದೆ.

ಹಜ್ ಪಾಲಿಸಿ ಶಿಫಾರಸ್ಸಿನ ಬಗ್ಗೆ ಚರ್ಚೆ ನಡೆಸಲು ಇನ್ನೊಂದೆರಡು ದಿನದಲ್ಲಿ ಸಭೆ ಕರೆಯಲಾಗುವುದು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಕೇಂದ್ರ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಕೌಡಿಜಾಲ್ ಹೇಳಿದ್ದಾರೆ. 45 ವರ್ಷ ಮೇಲ್ಪಟ್ಟ ಮಹಿಳೆಯರ ಕಡಿಮೆ ಪಕ್ಷ ನಾಲ್ಕು ತಂಡಗಳಿಗಾದರೂ ಪುರುಷರ ಬೆಂಗಾವಲಿಲ್ಲದೆ ಹಜ್ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಕೂಡ ಹಜ್ ಪಾಲಿಸಿ ಶಿಫಾರಸ್ಸು ಮಾಡಿದೆ.

ಪತ್ರಿಕೆಗಳಲ್ಲಿ ಸುದ್ದಿಯನ್ನು ಓದಿದ್ದೇವೆ. ಆದರೆ ಇದುವರೆಗೆ ವಿಸ್ತರಿತ ಪ್ರಸ್ತಾವನೆಯನ್ನು ನೋಡಿಲ್ಲ. ಈ ಪ್ರಸ್ತಾವನೆ ಬಗ್ಗೆ ಮುಸ್ಲಿಂ ಕೇಂದ್ರ ಸಮಿತಿ ಸದ್ಯದಲ್ಲೇ ಚರ್ಚೆ ನಡೆಸಲಿದೆ ಎಂದು ಇಬ್ರಾಹಿಂ ಹೇಳಿದ್ದಾರೆ.

ಇದೇ ವೇಳೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ “ಹಲವು ವರ್ಷಗಳಿಂದ ಕೊಡುತ್ತಾ ಬಂದಿರುವ ಸೌಲಭ್ಯವನ್ನು ರದ್ದುಪಡಿಸುವುದು ಸಮಂಜಸವಲ್ಲ ಎಂಬುದು ನನ್ನ ವ್ಯಯಕ್ತಿಕ ಅಭಿಪ್ರಾಯ” ಎಂದು ಹೇಳಿದ್ದಾರೆ. ಮುಸ್ಲಿಂ ಘಟಕದ ಮೂಲಕ ಕಾಂಗ್ರೆಸ್ ಈ ಬಗ್ಗೆ ಸಮರ್ಪಕವಾದ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಹಜ್ ಯಾತ್ರೆಯು ಮುಸ್ಲಿಂ ಧರ್ಮದ ಐದು ನಿಯಮಗಳಲ್ಲಿ ಒಂದಾಗಿದೆ. ಧರ್ಮದ ನಿಯಮ ಪ್ರಕಾರ ಮುಸ್ಲಿಮರು ಹಜ್ ಯಾತ್ರೆಯನ್ನು ತನ್ನ ಸ್ವಂತ ಗಳಿಕೆಯಲ್ಲಿ ಮಾಡಬೇಕು. ಇಸ್ಲಾಂ ಧರ್ಮದ ಪ್ರಕಾರ ಆರೋಗ್ಯವಂತ ಮತ್ತು ಸ್ಥಿತಿವಂತ ಮಾತ್ರ ಹಜ್ ಯಾತ್ರೆ ಕೈಗೊಳ್ಳಬೇಕು. ಆದರೆ ಹಲವು ವರ್ಷಗಳಿಂದ ಹಜ್ ಅನುದಾನ ಒಂದು ಸಂಪ್ರದಾಯವಾಗಿ ಬೆಳೆದಿರುವುದರಿಂದ ಅದನ್ನು ಮುಂದುವರಿಸಬಹುದು ಎಂದು ಕಾಂಗ್ರೆಸ್ ನಾಯಕ ಮತ್ತು ಮಂಗಳೂರು ನಗರಪಾಲಿಕೆ ಕಾರ್ಪೊರೇಟರ್ ಅಬ್ದುಲ್ ರವೂಫ್ ಹೇಳಿದ್ದಾರೆ.

“ಸರ್ಕಾರ ನೀಡುತ್ತಿರುವ ಅನುದಾನ ಮದ್ಯ ಮಾರಾಟ ಮತ್ತು ಬ್ಯಾಂಕಿನಿಂದ ಸಂಗ್ರಹಿಸಿದ ಬಡ್ಡಿಯಿಂದ ಬರುವ ಹಣವಾಗಿದ್ದು, ಇಸ್ಲಾಂ ಧರ್ಮದ ಪ್ರಕಾರ ಈ ಎರಡೂ ಮೂಲಗಳಿಂದ ಬರುವ ಹಣವನ್ನು ಹಜ್ ಯಾತ್ರೆಗೆ ಬಳಸುವುದು ಸ್ವೀಕಾರಾರ್ಹವಲ್ಲದ್ದು” ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಮ್ ಉಚ್ಚಿಲ್ ಹೇಳಿದ್ದಾರೆ.