2ನೇ ಟೆಸ್ಟ್ ಪಂದ್ಯಕ್ಕೆ ರಾಹುಲ್, ರಹಾನೆ ?

  • ಎಸ್ ಜಗದೀಶ್ಚಂದ್ರ ಅಂಚನ್

ಭಾರತೀಯ ಕ್ರಿಕೆಟ್ ತಂಡ ಮೊದಲ ಬಾರಿಗೆ ದಕ್ಷಿಣ ಆಫ್ರಿಕನ್ ನೆಲದಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಕೇಪ್ ಟೌನಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡ ಸೋತ ಬಳಿಕ ಮುಂದಿನ ಟೆಸ್ಟ್ ಪಂದ್ಯಕ್ಕೆ ಅಣಿಯಾಗುತ್ತಿದೆ. ಈ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾದರೆ ತಂಡದಲ್ಲಿ ಬದಲಾವಣೆ ಅನಿವಾರ್ಯ ಎನ್ನುವುದು ಟೀಂ ಮ್ಯಾನೇಜ್ಮೆಂಟಿಗೆ ತಡವಾಗಿ ಅರ್ಥವಾಗಿದೆ. ಹಾಗಾಗಿ, ಸೆಂಚೂರಿಯನ್ ಪಾರ್ಕ್ ಮೈದಾನದಲ್ಲಿ ನಡೆಯುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಕೆ ಎಲ್ ರಾಹುಲ್ ಮತ್ತು ಅಜಿಂಕ್ಯ ರಹಾನೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಭಾರತೀಯ ಕ್ರಿಕೆಟ್ ರಂಗ ಅನೇಕ ಸೂಪರ್ ಸ್ಟಾರ್ ಕ್ರಿಕೆಟ್ ಆಟಗಾರರನ್ನು ಜಾಗತಿಕ ಕ್ರಿಕೆಟಿಗೆ ಪರಿಚಯಿಸಿದೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜ ಕ್ರಿಕೆಟಿಗರು ಭಾರತೀಯ ಕ್ರಿಕೆಟ್ ರಂಗಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹಾನುಭಾವರು ವಿದೇಶಿ ನೆಲದಲ್ಲಿ ಕ್ರೀಸಿಗೆ ಅಂಟಿಕೊಂಡು ಆಡಿದ ರೀತಿ ಕ್ರಿಕೆಟ್ ಪ್ರೇಮಿಗಳು ಎಂದೂ ಮರೆಯಲಾರರು.

ಹಾಗಾದರೆ, ಗವಾಸ್ಕರ್, ಸಚಿನ್, ದ್ರಾವಿಡ್ ಅವರಂತೆಯೇ ಆಡುವ ಆಟಗಾರರು ಸದ್ಯ ಭಾರತೀಯ ಕ್ರಿಕೆಟ್ ತಂಡದಲ್ಲಿ ಇಲ್ಲವೇ ? ಎನ್ನುವ ಪ್ರಶ್ನೆ ಮೂಡಿದೆ. ಮೊದಲ ಟೆಸ್ಟಿನಲ್ಲಿ ಐವರು ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ನುಗಳು ಆಡಿದ್ದಾರೆ. ಶಿಖರ್ ಧವನ್, ಮುರಳಿ ವಿಜಯ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯಾ ತಂಡದಲ್ಲಿದ್ದರೂ ಸೋಲು ಕಂಡಿತು.ಈಗ ಈ ಐವರಲ್ಲಿ ಇಬ್ಬರು ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೌದು, ಭಾರತೀಯ ತಂಡಕ್ಕೆ ಈಗ ಕ್ರೀಸಿನಲ್ಲಿ ತಳವೂರಿ ಜತೆಗಾರನಿಗೆ ಧೈರ್ಯ ತುಂಬಿ ಆಡುವ ಆಟಗಾರರ ಅವಶ್ಯಕತೆ ಇದೆ. ಇಂತಹ ವಿಶಿಷ್ಟ ಶೈಲಿಯ ಆಟವನ್ನು ಆಡುವುದರಲ್ಲಿ ಕೆ ಎಲ್ ರಾಹುಲ್  ಹಾಗೂ ಅಜಿಂಕ್ಯ ರಹಾನೆ ನಿಸ್ಸೀಮರು. ಹಾಗಾಗಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಅವರ ಸ್ಥಾನವನ್ನು ರಾಹುಲ್ ಮತ್ತು ರಹಾನೆ ತುಂಬಲಿದ್ದಾರೆ.

ಅಂತೂ ಜನವರಿ-13ರಂದು ಆರಂಭಗೊಳ್ಳಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ  ಭಾರತೀಯ ತಂಡ ಸೋಲು ತಪ್ಪಿಸಲು ರಣತಂತ್ರವನ್ನು ರೂಪಿಸಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿಗೆ ಇದು ಕಬ್ಬಿಣದ ಕಡಲೆಯಾಗಿದೆ. ಏಕೆಂದರೆ ಕೇಪ್ ಟೌನಿಗಿಂತ ಸೆಂಚೂರಿಯನ್ ಪಿಚ್ ವೇಗ ಹಾಗೂ ಹೆಚ್ಚು ಬೌನ್ಸ್ ಆಗಲಿದೆ. ಪಕ್ಕಾ ವೇಗದ ಬೌಲರುಗಳಿಗೆ ಸಹಾಯವಾಗುವ ಪಿಚ್ ಇದಾಗಿದೆ. ಹಾಗಾಗಿ ವಿದೇಶಿ ನೆಲದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರಾಹುಲ್ ಹಾಗೂ ರಹಾನೆ ದ್ವಿತೀಯ ಟೆಸ್ಟ್ ಪಂದ್ಯವನ್ನು ಆಡಲು ಸನ್ನದ್ದರಾಗಿದ್ದಾರೆ. ಆದರೆ, ಭಾರತದ ಟೀಂ ಮ್ಯಾನೇಜ್ಮೆಂಟ್ ಅವಕಾಶ ಕಲ್ಪಿಸಿದರೆ ಮಾತ್ರ.

LEAVE A REPLY