ರಾಹುಲ್ ಗಾಂಧಿ ಸಮರ್ಥ ಆಯ್ಕೆ : ಸಚಿವ ರೈ ಹರ್ಷ

ಮಂಗಳೂರು : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುವುದು ಸಮರ್ಥವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಚಿವ ಬಿ ರಮಾನಾಥ ರೈ ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಇದೀಗ ರಾಹುಲ್ ಗಾಂಧಿ ನೇಮಕ ಆಗಿದ್ದಾರೆ. ನಾವು ಹಲವು ಕಡೆಗಳಲ್ಲಿ ಮುಂದಿನ ಭಾರತ ಯುವಕರ ಭಾರತ ಎಂದು ಹೇಳುತ್ತೇವೆ. ಯುವಕರಿಗೆ ನಾಯಕತ್ವ ಕೊಡಬೇಕು ಎಂದು ಹೇಳುತ್ತೇವೆ. ಆದರೆ ವಾಸ್ತವಿಕತೆ ಬಂದಾಗ ಯುವಕರ ಬಗ್ಗೆ ಚರ್ಚೆ ಮಾಡುವುದಿಲ್ಲ. ಕಾಂಗ್ರೆಸ್ಸಿಗೆ ನೇತೃತ್ವ ಯುವಕರಿಂದ ಸಿಕ್ಕಿದೆ” ಎಂದರು.

“ಮೋತಿಲಾಲ್ ನೆಹರೂ ಪುತ್ರ ಜವಾಹರಲಾಲ್ ನೆಹರೂ ಈ ದೇಶದ ಪ್ರಧಾನ ಮಂತ್ರಿಯಾಗಿದ್ದವರು. ಜವಾಹರ ಲಾಲ್ ನೆಹರೂ ಪುತ್ರಿ ಇಂದಿರಾ ಗಾಂಧಿ ದೇಶದ ಪ್ರಧಾನಿಯಾದವರು ಈ ದೇಶಕ್ಕೆ ಪ್ರಾಣವನ್ನೇ ಕೊಟ್ಟವರು. ಬಳಿಕ ಅವರ ಅವರ ಮಗ ರಾಜೀವ್ ಗಾಂಧಿ ಅವರೂ ದೇಶಕ್ಕೆ ಪ್ರಾಣ ಕೊಟ್ಟವರು. ಇದೀಗ ಅದೇ ಕುಟುಂಬದ ಕುಡಿ ಈ ರಾಹುಲ್ ಗಾಂಧಿ. ಮೋತಿಲಾಲ್ ನೆಹರೂ ಕುಟುಂಬದಿಂದ ಬಂದ ಕುಡಿ ದೇಶ ಆಳ್ವಿಕೆ ನಡೆಸಲು ಅರ್ಹವಾಗಿಯೇ ಯೋಗ್ಯತೆ ಪಡೆದಿದೆ. ದೇಶದ ಆಳ್ವಿಕೆ ಮಾಡಲು ರಾಹುಲ್ ಗಾಂಧಿ ತುಂಬಾ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಹೇಳಲು ಇಷ್ಟಪಡುತ್ತೇನೆ” ಎಂದು ಸಚಿವ ರೈ ಹೇಳಿದರು.