`ರಾಘವೇಶ್ವರ ಪೀಠತ್ಯಾಗ ಮಾಡಲಿ’ ಎಂದ ಉಗ್ರಪ್ಪ

ರಾಘವೇಶ್ವರ ಸ್ವಾಮಿ

ಬೆಂಗಳೂರು : “ರಾಮಚಂದ್ರಾಪುರದ ರಾಘವೇಶ್ವರ ಸ್ವಾಮಿ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿ ಒಂದು ವರ್ಷ ಕಳೆದಿದ್ದರೂ ಸಿಐಡಿ ಇದುವರೆಗೂ ದೋಷಾರೋಪ ಪಟ್ಟಿ ಅಥವಾ ಬಿ ವರದಿಯನ್ನು ಸಲ್ಲಿಸಿಲ್ಲ. ಈ ಬಗ್ಗೆ ಅಖಿಲ ಕರ್ನಾಟಕ ಹವ್ಯಕ ಸಮಾಜದವರು ನನ್ನ ಗಮನಕ್ಕೆ ತಂದಿದ್ದಾರೆ. ಶೀಘ್ರವೇ ಮುಂದಿನ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಅವರ ಗಮನಕ್ಕೂ ತರಲಾಗುವುದು” ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ಸಮಿತಿ ಅಧ್ಯಕ್ಷ ವಿ ಎಸ್ ಉಗ್ಗಪ್ಪ ತಿಳಿಸಿದ್ದಾರೆ.

ಉಗ್ರಪ್ಪ
ಉಗ್ರಪ್ಪ

ನಿಯೋಗದ ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಘವೇಶ್ವರ ಸ್ವಾಮಿ ಅವರ ಪ್ರಕರಣದಲ್ಲಿ ನ್ಯಾಯಾಲಯವೇ ಮುಕ್ತ ವಿಚಾರಣೆಯ ವೇಳೆ ಇಂತಹ ಸ್ವಾಮೀಜಿ ಇರಬೇಕೇ ಎಂದು ಪ್ರಶ್ನಿಸಿದೆ. ವಿಶೇಷವಾಗಿ ರಾಮನ ಬಗ್ಗೆ ಮಾತನಾಡುವ ಸ್ವಾಮಿ ಪೀಠ ತ್ಯಾಗ ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತಿತ್ತು” ಎಂದು ಅವರು ಹೇಳಿದರು.

“ಪ್ರೇಮಲತಾ ಪ್ರಕರಣ, ವಿದ್ಯಾರ್ಥಿನಿಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣ ಹಾಗೂ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಪ್ರಕರಣಗಳು ವಿಳಂಬವಾಗುತ್ತಿರುವ ಬಗ್ಗೆಯೂ ನಿಯೋಗ ಕಳವಳ ವ್ಯಕ್ತಪಡಿಸಿದೆ. ಮನುಷ್ಯ ಸಹಜವಾದ ಕಾಮ, ಕ್ರೋಧ, ಮದ, ಮತ್ಸರವನ್ನು ಜಯಿಸಲು ಸ್ವಾಮೀಜಿ ವಿಫಲರಾಗಿದ್ದಾರೆ. ಅವರು ನಡೆದುಕೊಂಡ ರೀತಿ ಸರಿಯಿಲ್ಲ. ಅವರು ಪೀಠ ತ್ಯಾಗ ಮಾಡುವಂತೆ ಒತ್ತಾಯಿಸಿದ್ದರೂ ಅವರು ತನ್ನ ನಿಲುವು ಬದಲಿಸಿ ಪ್ರೇಮಲತಾ ಮತ್ತು ದಿವಾಕರ್ ಶಾಸ್ತ್ರಿ ಅವರ ಮೇಲೆಯೇ ಬ್ಲಾಕ್ ಮೇಲ್ ಪ್ರಕರಣ ದಾಖಲಿಸಿದ್ದಾರೆ. ದಿವಾಕರ್ ಶಾಸ್ತ್ರಿ ಅವರ ಸಹೋದರ ಶಾಮಶಾಸ್ತ್ರಿ ಅವರ ಸಾವಿಗೂ ಸ್ವಾಮಿ ಹಾಗೂ ಅವರ ಅನುಯಾಯಿಗಳೇ ಕಾರಣರಾಗಿದ್ದಾರೆ ಎಂದು ನಿಯೋಗ ಆರೋಪಿಸಿದೆ” ಎಂದು ಉಗ್ಗಪ್ಪ ಹೇಳಿದರು.

“ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ 90 ದಿನದೊಳಗಾಗಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಆದರೆ ಈ ಪ್ರಕರಣದಲ್ಲಿ ವಿಳಂ¨ವಾಗಿರುವುದು ನಿಜ” ಎಂದು ಒಪ್ಪಿಕೊಂಡ ವಿ ಎಸ್ ಉಗ್ಗಪ್ಪ, “ನಿಯೋಗದ ಸಮ್ಮುಖದಲ್ಲಿ ಸಿಐಡಿ, ಡಿಜಿಪಿ, ಕಿಶೋರ್ ಚಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿದ್ದೇನೆ. ಸಮಿತಿ ಅಧ್ಯಕ್ಷನಾಗಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದು, ಪ್ರಭಾವ ಬೀರುವುದು ಸಾಧ್ಯವಿಲ್ಲ. ಅದರೂ ವಿಳಂಬಕ್ಕೆ ಕಾರಣ ಕೇಳಿದಾಗ ಕಿಶೋರ್ ಚಂದ್ರ ಅವರು ಪ್ರಕರಣದ ಎಲ್ಲ ತನಿಖೆಗಳು ಮುಗಿದಿದ್ದು, ಶೀಘ್ರವೇ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ ಎಂದು ಉಗ್ಗಪ್ಪ ತಿಳಿಸಿದರು.